ಪೊಟ್ಚೆಫ್ಸ್ಟ್ರೂಮ್, ಜ 29 (DaijiworldNews/SM): ಭಾರತ ತಂಡ ಜಾಗತಿಕ ಕ್ರಿಕೆಟ್ ನಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳೆಯರ ಚೊಚ್ಚಲ ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿ ದಾಖಲೆ ನಿರ್ಮಿಸಿದೆ.
ದಕ್ಷಿಣ ಆಫ್ರಿಕಾದ ಪೊಟ್ಚೆಫ್ಸ್ಟ್ರೂಮ್ ನ ಸೆನ್ವೆಸ್ ಪಾರ್ಕ್ ನಲ್ಲಿ ಇಂದು ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಭಾರತ ಮಹಿಳಾ ಯುವ ಪಡೆ 7 ವಿಕೆಟ್ ಗಳ ಅಂತರದಲ್ಲಿ ಭರ್ಜರಿಯಾಗಿ ಮಣಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟಿದೆ. ಇಂದು ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ಮಹಿಳಾ ಯುವ ತಂಡ ನೀಡಿದ 69ರನ್ ಗಳ ಸಾಮಾನ್ಯ ಗುರಿಯನ್ನು ಬೆನ್ನು ಹತ್ತಿದ ಭಾರತ ಮಹಿಳಾ ತಂಡ ಕೇವಲ 14 ಓವರ್ ನಲ್ಲಿಯೇ 3 ವಿಕೆಟ್ ಕಳೆದು ಗುರಿ ಸಾಧಿಸಿತು.
ಆ ಮೂಲಕ ಐಸಿಸಿಯ ಚೊಚ್ಚಲ ಮಹಿಳಾ ಅಂಡರ್ 19 ವಿಶ್ವಕಪ್ ಟೂರ್ನಿಯನ್ನು ಗೆದ್ದುಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಭಾರತೀಯ ಬೌಲರ್ ಗಳ ಸಾಂಘಿಕ ಆಕ್ರಮಣಕ್ಕೆ ಪತರಗುಟ್ಟಿ ರನ್ ಗಳಿಸಲು ಪರದಾಡಿತು. ಇಂಗ್ಲೆಂಡ್ ನಾಲ್ಕು ಮಂದಿ ಆಟಗಾರ್ತಿಯರು ಮಾತ್ರ ಎರಡಂಕಿ ಮೊತ್ತ ಕಲೆ ಹಾಕಿದರೆ, 7 ಮಂದಿ ಆಟಗಾರ್ತಿಯರು ಒಂದಂಕಿಗೇ ಔಟಾಗಿದ್ದಾರೆ.