ಲಕ್ನೋ, ಜ 31 (DaijiworldNews/DB): 19 ವಯೋಮಿತಿ ಮಹಿಳಾ ವಿಶ್ವಕಪ್ ಕ್ರಿಕೆಟ್ನಲ್ಲಿ ಭಾರತದ ಮಹಿಳಾ ತಂಡ ಗೆದ್ದು ಬೀಗಿತ್ತು. ಈ ತಂಡದಲ್ಲಿದ್ದ ಅರ್ಚನಾ ಮನೆಯಲ್ಲಿ ವಿದ್ಯುತ್ ಸಮಸ್ಯೆ ಇದ್ದ ಕಾರಣ ಮನೆ ಮಗಳು ಕ್ರಿಕೆಟ್ ಆಡುವುದನ್ನು ಕಣ್ತುಂಬಿಕೊಳ್ಳಲು ಪೊಲೀಸ್ ಅಧಿಕಾರಿಯೊಬ್ಬರು ಆಕೆಯ ಮನೆಗೆ ಇನ್ವರ್ಟರ್ ಒದಗಿಸಿದ್ದಾರೆ!
ಹೌದು. ಕಾನ್ಪುರದಲ್ಲಿ ಭಾನುವಾರ 19 ವಯೋಮಿತಿ ಮಹಿಳಾ ವಿಶ್ವಕಪ್ನಲ್ಲಿ ಮಗಳು ಆಡಿ ಗೆಲುವು ಸಾಧಿಸಿದ್ದನ್ನು ತಾಯಿ ತಮ್ಮ ಮನೆಯಿಂದಲೇ ಯಾವುದೇ ವಿದ್ಯುತ್ ಅಡಚಣೆ ಇಲ್ಲದೆ ವೀಕ್ಷಿಸಿದ್ದಾರೆ. ಅರ್ಚನಾ ದೇವಿ ಎಂಬ ಹಳ್ಳಿಯ ಪ್ರತಿಭೆಯೊಂದು ಈ ಕ್ರಿಕೆಟ್ ಪಂದ್ಯದ ಮೂಲಕ ದೇಶಕ್ಕೆ ಪರಿಚಯವಾಗಿದ್ದಾರೆ.
ಅರ್ಚನಾ ಮನೆ ಕಾನ್ಪುರದಿಂದ ಕೇವಲ 30 ಕಿ.ಮೀ. ದೂರದಲ್ಲಿದೆ. ಆದರೆ ಈ ಹಳ್ಳಿಯಲ್ಲಿ ವಿದ್ಯುತ್ನದ್ದು ಪ್ರತಿದಿನದ ಸಮಸ್ಯೆ. ಹೀಗಾಗಿ ಭಾನುವಾರ ಅರ್ಚನಾ ಆಟ ನೋಡುವುದು ಹೇಗೆಂಬ ಚಿಂತೆಯಲ್ಲಿ ಮನೆಯವರಿದ್ದರು. ಈ ವಿಚಾರ ಪೊಲೀಸ್ ಅಧಿಕಾರಿಯೊಬ್ಬರಿಗೆ ಗೊತ್ತಾಗಿ ಕೂಡಲೇ ಅವರು ಮನೆಗೆ ಇನ್ವರ್ಟರ್ ಕಳುಹಿಸಿಕೊಟ್ಟಿದ್ದಾರೆ. ಆ ಮೂಲಕ ಯಾವುದೇ ಅಡಚಣೆಯಿಲ್ಲದೆ ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಿಕೊಟ್ಟರು.
ಇನ್ನು ಈ ಬಗ್ಗೆ ಖುಷಿ ಹಂಚಿಕೊಂಡ ಅರ್ಚನಾ ಸಹೋದರ ರೋಹಿತ್, ನಮ್ಮ ಮನೆಯಲ್ಲಿ ಅರ್ಚನಾ ಪಂದ್ಯ ಆಡುವುದನ್ನು ವೀಕ್ಷಿಸಲು ವಿದ್ಯುತ್ ಸಮಸ್ಯೆ ಎದುರಾಗಿತ್ತು. ಇದು ಊರಿನ ಪೊಲೀಸ್ ಅಧಿಕಾರಿಯೊಬ್ಬರಿಗೆ ಗೊತ್ತಾಗಿ ಕೂಡಲೇ ಅವರು ನಮಗೆ ಇನ್ವರ್ಟರ್ ಕಳುಹಿಸಿಕೊಟ್ಟರು. ಇದರಿಂದ ವಿದ್ಯುತ್ ಸಮಸ್ಯೆಯ ನಡುವೆಯೂ ನಮಗೆ ಪಂದ್ಯ ವೀಕ್ಷಿಸುವುದು ಸುಲಭವಾಯಿತು ಎಂದು ಹೇಳಿಕೊಂಡರು.
ಕ್ರಿಕೆಟ್ ಬಗ್ಗೆ ತಾಯಿಗೆ ಗೊತ್ತಿಲ್ಲದಿದ್ದರೂ, ಟಿವಿಯಲ್ಲಿ ಮಗಳು ಆಡುತ್ತಿರುವುದನ್ನು ನೋಡಿ ಸಂಭ್ರಮಿಸಿದ್ದಾರೆ. ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ಅರ್ಚನಾ ತಾಯಿ ಸಾವಿತ್ರಿ ದೇವಿ ಮತ್ತು ಸಹೋದರ ರೋಹಿತ್ ಇಡೀ ಗ್ರಾಮಸ್ಥರಿಗೆ ಲಡ್ಡು ಹಂಚಿದ್ದಾರೆ.
ವ್ಯಂಗ್ಯದ ನಡುವೆ ಅರಳಿದ ಸಾಧನೆ
ಅರ್ಚನಾ ತಂದೆ ಅನಾರೋಗ್ಯದಿಂದಾಗಿ 2008 ಮತ್ತು ಓರ್ವ ಸಹೋದರ 2017ರಲ್ಲಿ ಹಾವು ಕಡಿತಕ್ಕೊಳಗಾಗಿ ತೀರಿಕೊಂಡಿದ್ದರು. ಮನೆಯ ಪರಿಸ್ಥಿತಿ ತೀರಾ ಕಷ್ಟದಲ್ಲಿದ್ದಾಗ ಕ್ರಿಕೆಟ್ ಬೇಡವೆಂದು ತಾಯಿ ಹಠ ಹಿಡಿದಿದ್ದರು. ಅಲ್ಲದೆ ಊರಿನವರು ವ್ಯಂಗ್ಯವಾಡುತ್ತಲೇ ಇದ್ದರು. ಆದರೆ ಎಲ್ಲಾ ವಿರೋಧಗಳನ್ನು ಕ್ರಮಿಸಿ ಅರ್ಚನಾ ತಮ್ಮಿಷ್ಟದ ಕ್ರಿಕೆಟ್ನಲ್ಲಿ ಪಳಗಿದ್ದರು. ಇದೀಗ ಇಡೀ ರಾಷ್ಟ್ರವೇ ತಿರುಗಿ ನೋಡುವ ಸಾಧನೆ ಮಾಡಿದ್ದಾರೆ.