ನವದೆಹಲಿ, ಫೆ 01 (DaijiworldNews/DB): ನೂತನ ಟಿ20 ಬ್ಯಾಟ್ಸ್ಮನ್ಗಳ ರ್ಯಾಂಕಿಂಗ್ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಪ್ರಕಟಿಸಿದ್ದು, ಭಾರತದ ಮಿಸ್ಟರ್ 360 ಡಿಗ್ರಿ ಎಂದೇ ಖ್ಯಾತರಾದ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನ ಪಡೆದಿದ್ದಾರೆ. 910 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಯಾದವ್ ಮೊದಲ ಸ್ಥಾನದಲ್ಲಿದ್ದಾರೆ.
ವಿಶೇಷವೆಂದರೆ ಐಸಿಸಿ ಟಿ20 ರ್ಯಾಂಕಿಂಗ್ ಇತಿಹಾಸದಲ್ಲೇ ಅತ್ಯಧಿಕ ಪಾಯಿಂಟ್ ಪಡೆದ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ, ಇಷ್ಟು ಅಂಕ ಪಡೆದ ವಿಶ್ವದ 2ನೇ ಬ್ಯಾಟ್ಸ್ಮನ್ ಖ್ಯಾತಿ ಕೂಡಾ ಸೂರ್ಯಕುಮಾರ್ ಯಾದವ್ ಪಾಲಾಗಿದೆ. ವಿಶ್ವದಲ್ಲಿ ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ ಆಟಗಾರ ಡೇವಿಡ್ ಮಲಾನ್ (915 ಪಾಯಿಂಟ್) ಇದ್ದಾರೆ. ಇಂದು ನ್ಯೂಜಿಲ್ಯಾಂಡ್ ವಿರುದ್ದ ನಡೆಯಲಿರುವ 3ನೇ ಟಿ20 ಯಲ್ಲಿ ಫೈನಲ್ನಲ್ಲಿ ಸೂರ್ಯಕುಮಾರ್ ಪ್ರದರ್ಶನ ಭರ್ಜರಿಯಾಗಿದ್ದರೆ, ರ್ಯಾಂಕಿಂಗ್ ಇನ್ನಷ್ಟು ಏರಿಕೆಯಾಗಬಹುದು.
ಸದ್ಯ ಅಗ್ರಸ್ಥಾನದಲ್ಲಿರುವ ಒಟ್ಟು 10 ಆಟಗಾರರ ಹೆಸರನ್ನು ಐಸಿಸಿ ಪ್ರಕಟಿಸಿದ್ದು, ಆ ಪೈಕಿ ಸೂರ್ಯಕುಮಾರ್ ಯಾದವ್ (ಭಾರತ)- 910 ಅಂಕಗಳ ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ್) - 836 ಅಂಕಗಳ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಡೆವೊನ್ ಕಾನ್ವೇ (ನ್ಯೂಜಿಲೆಂಡ್)- 788 ಅಂಕ, ಬಾಬರ್ ಆಜಂ (ಪಾಕಿಸ್ತಾನ್) - 778 ಅಂಕ, ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ) - 748 ಅಂಕ, ಡೇವಿಡ್ ಮಲಾನ್ (ಇಂಗ್ಲೆಂಡ್) - 719 ಅಂಕ, ರಿಲೀ ರೊಸ್ಸೊ (ಸೌತ್ ಆಫ್ರಿಕಾ)- 693 ಅಂಕ, ಆರೋನ್ ಫಿಂಚ್ (ಆಸ್ಟ್ರೇಲಿಯಾ) - 680 ಅಂಕ, ಗ್ಲೆನ್ ಫಿಲಿಪ್ಸ್ (ನ್ಯೂಜಿಲೆಂಡ್)- 676 ಅಂಕ, ಅಲೆಕ್ಸ್ ಹೇಲ್ (ಇಂಗ್ಲೆಂಡ್)- 655 ಅಂಕ ಪಡೆಯುವ ಮೂಲಕ ಕ್ರಮವಾಗಿ ಮೂರರಿಂದ ಹತ್ತರ ತನಕದ ಸ್ಥಾನ ಪಡೆದಿದ್ದಾರೆ.