ಅಹಮದಾಬಾದ್, ಫೆ 01 (DaijiworldNews/SM): ನ್ಯೂಜಿಲ್ಯಾಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 168 ರನ್ ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದ್ದು, ಸರಣಿ ಕೈ ವಶ ಮಾಡಿಕೊಂಡಿದೆ.
ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾಕ್ಕೆ ಉತ್ತಮ ಆರಂಭ ಸಿಕ್ಕಿತು. ಭಾರತೀಯ ಬ್ಯಾಟರ್ ಗಳು ಅಬ್ಬರಿಸಿದ್ದು ನ್ಯೂಜಿಲ್ಯಾಂಡ್ ಗೆ ಗೆಲ್ಲಲು 235 ರನ್ ಗಳ ಗುರಿ ನೀಡಿದರು.
ಟೀಂ ಇಂಡಿಯಾ ಪರ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅಬ್ಬರದ ಬ್ಯಾಟಿಂಗ್ ಮಾಡಿದ್ದು 63 ಎಸೆತಗಳಲ್ಲಿ 7 ಸಿಕ್ಸರ್, 12 ಬೌಂಡರಿ ಸೇರಿದಂತೆ ಅಜೇಯ 126 ರನ್ ಪೇರಿಸಿದ್ದಾರೆ. ಇನ್ನುಳಿದಂತೆ ಇಶಾನ್ ಕಿಶನ್ 1, ರಾಹುಲ್ ತ್ರಿಪಾಠಿ 44, ಸೂರ್ಯಕುಮಾರ್ ಯಾದವ್ 24 ಹಾಗೂ ಹಾರ್ತಿಕ್ ಪಾಂಡ್ಯ 30 ರನ್ ಪೇರಿಸಿದ್ದಾರೆ.
ಇನ್ನು ಇದಕ್ಕೆ ಉತ್ತರವಾಗಿ ನ್ಯೂಜಿಲ್ಯಾಂಡ್ 12.1 ಓವರ್ ಗಳಲ್ಲಿ 66 ರನ್ ಗಳಿಸಿ ಸರ್ವ ಪತನಗೊಂಡಿತು. ಡೆರಿಲ್ ಮಿಚೆಲ್ 35, ನಾಯಕ ಮಿಚೆಲ್ ಸೆಂಟ್ನರ್ 13 ರನ್ ಹೊರತಾಗಿ ಯಾವೊಬ್ಬ ಆಟಗಾರನೂ ಕೂಡ ಎರಡಂಕಿ ದಾಟಲಿಲ್ಲ. ಅಂತಿಮವಾಗಿ 168 ರನ್ ಗಳ ಅಂತರದಿಂದ ಭಾರತಕ್ಕೆ ಶರಣಾಯಿತು.
ಟೀಂ ಇಂಡಿಯಾ ಪರ ಮಾರಕ ದಾಳಿ ನಡೆಸಿದ ನಾಯಕ ಹಾರ್ದಿಕ್ ಪಾಂಡ್ಯ 4 ವಿಕೆಟ್ ಪಡೆದರು. ಉಳಿದಂತೆ ಅರ್ಷ್ ದೀಪ್ ಸಿಂಗ್, ಉಮ್ರನ್ ಮಲ್ಲಿಕ್, ಶಿವಂ ಮಾವಿ ತಲಾ 2 ವಿಕೆಟ್ ಪಡೆದರು.