ಅಹಮದಾಬಾದ್, ಫೆ 03 (DaijiworldNews/DB): ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯಕ್ಕೆ ಸ್ವತಃ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಅವರೇ ಸಾಕ್ಷಿಯಾಗಲಿದ್ದಾರೆ.
ಫೆಬ್ರವರಿ 9ರಿಂದ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿ ಆರಂಭವಾಗಲಿದೆ. ಮೊದಲ ಮೂರು ಪಂದ್ಯಗಳು ಕ್ರಮವಾಗಿ ನಾಗ್ಪುರದ ವಿಧರ್ಭ ಕ್ರಿಕೆಟ್ ಸ್ಟೇಡಿಯಂ, ದೆಹಲಿ ಅರುಣ್ ಜೇಟ್ಲಿ ಕ್ರೀಡಾಂಗಣ ಹಾಗೂ ಧರ್ಮಶಾಲದ ಹಿಮಾಚಲ್ ಪ್ರದೇಶ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಅಂತಿಮ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಾರ್ಚ್ 9ರಿಂದ 13ರವರೆಗೆ ನಡೆಯಲಿದ್ದು, ಈ ಪಂದ್ಯಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್ ಅವರು ಸಾಕ್ಷಿಯಾಗಲಿದ್ದಾರೆ. ಅಂತಿಮ ಪಂದ್ಯದಲ್ಲಿ ಸೆಣಸಾಡಲಿರುವ ಎರಡೂ ತಂಡಗಳ ದೇಶದ ಪ್ರಧಾನಿಗಳೇ ಭಾಗವಹಿಸಲಿರುವುದರಿಂದ ಎರಡು ತಂಡಗಳಿಗೂ ಇದು ಪ್ರತಿಷ್ಠೆಯ ಪಂದ್ಯವಾಗಿದೆ.
ಮಾರ್ಚ್ನಲ್ಲಿ ನಡೆಯುವ ಕೊನೆಯ ಪಂದ್ಯದ ವೇಳೆ ಆಸ್ಟ್ರೇಲಿಯಾ ಪ್ರಧಾನಿ ಭಾರತದಲ್ಲಿ ಇರಲಿದ್ದು, ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಆಸ್ಟ್ರೇಲಿಯಾ ಪ್ರಧಾನಿಯವರೂ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇನ್ನು ಅಹಮದಾಬಾದ್ನ ಮೊಟೆರಾ ಸ್ಟೇಡಿಯಂಗೆ ನರೇಂದ್ರ ಮೋದಿ ಎಂಬುದಾಗಿ ಮರು ನಾಮಕರಣ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಪಂದ್ಯ ವೀಕ್ಷಣೆಗೆ ನರೇಂದ್ರ ಮೋದಿಯವರು ಆಗಮಿಸುತ್ತಿದ್ದಾರೆ.