ನಾಗ್ಪುರ, ಫೆ 09 (DaijiworldNews/SM): ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ ಹಲವು ದಾಖಲೆ ಸೃಷ್ಠಿಸಿದ್ದಾರೆ. ಅಶ್ವಿನ್ ಭಾರತ ಪರ ಅತಿ ವೇಗದಲ್ಲಿ 450 ಟೆಸ್ಟ್ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಡುವ ಮೂಲಕ ಅಶ್ವಿನ್ ತಮ್ಮ 450ನೇ ಟೆಸ್ಟ್ ವಿಕೆಟ್ ಪಡೆದರು. ಅಶ್ವಿನ್ ಇದೀಗ ಭಾರತದ ಅನಿಲ್ ಕುಂಬ್ಳೆ, ಗ್ಲೆನ್ ಮೆಕ್ಗ್ರಾತ್, ಶೇನ್ ವಾರ್ನ್ ಮತ್ತು ನಾಥನ್ ಲಿಯಾನ್ ಅವರನ್ನು ಅತಿ ವೇಗದ ಟೆಸ್ಟ್ ವಿಕೆಟ್ ಪಡೆಯುವಲ್ಲಿ ಹಿಂದಿಕ್ಕಿದ್ದಾರೆ. ಮತ್ತೊಂದೆಡೆ, ಟೆಸ್ಟ್ನಲ್ಲಿ 450 ವಿಕೆಟ್ಗಳನ್ನು ಪಡೆದ ವಿಶ್ವದ ಒಂಬತ್ತನೇ ಬೌಲರ್ ಅಶ್ವಿನ್ ಆಗಿದ್ದಾರೆ.
ರವಿಚಂದ್ರನ್ ಅಶ್ವಿನ್ ತಮ್ಮ 89ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಅಷ್ಟೇ ಅಲ್ಲ, ಆಸ್ಟ್ರೇಲಿಯ ವಿರುದ್ಧ 18 ಪಂದ್ಯಗಳಲ್ಲಿ ಅಶ್ವಿನ್ 91 ವಿಕೆಟ್ ಪಡೆದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕಾಂಗರೂ ತಂಡದ ವಿರುದ್ಧ ವಿಕೆಟ್ಗಳ ಶತಕ ಪೂರೈಸಲು ಕೇವಲ 7 ವಿಕೆಟ್ ಗಳನ್ನು ಮಾತ್ರ ಪಡೆಯಬೇಕಿದೆ. ಭಾರತದ ಇನ್ನಿಂಗ್ಸ್ನಲ್ಲಿ ಅಶ್ವಿನ್ 15.5 ಓವರ್ ಬೌಲ್ ಮಾಡಿ ಮೂರು ವಿಕೆಟ್ ಪಡೆದರು. ಭಾರತದ ಅನಿಲ್ ಕುಂಬ್ಳೆ ಇದೀಗ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಕುಂಬ್ಳೆ ತಮ್ಮ 93ನೇ ಟೆಸ್ಟ್ನಲ್ಲಿ ಈ ಸಾಧನೆ ಮಾಡಿದ್ದರು.
ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಪರ 450 ವಿಕೆಟ್ ಪಡೆದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ. ಅಶ್ವಿನ್ಗಿಂತ ಮೊದಲು ಭಾರತಕ್ಕಾಗಿ ಅನಿಲ್ ಕುಂಬ್ಳೆ ಈ ಸಾಧನೆ ಮಾಡಿದ್ದರು. ಮತ್ತೊಂದೆಡೆ, ನಾವು ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ವಿಕೆಟ್ಗಳ ಬಗ್ಗೆ ಮಾತನಾಡಿದರೆ, ಅದು ಶ್ರೀಲಂಕಾದ ಶ್ರೇಷ್ಠ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರ ಹೆಸರಿನಲ್ಲಿದೆ. 133 ಟೆಸ್ಟ್ ಪಂದ್ಯಗಳಲ್ಲಿ 800 ವಿಕೆಟ್ ಪಡೆದಿದ್ದಾರೆ. ಇದಲ್ಲದೇ 145 ಟೆಸ್ಟ್ ಪಂದ್ಯಗಳಲ್ಲಿ 708 ವಿಕೆಟ್ ಪಡೆದಿರುವ ಆಸ್ಟ್ರೇಲಿಯಾದ ಶೇನ್ ವಾರ್ನ್ ಎರಡನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಭಾರತದ ಅನಿಲ್ ಕುಂಬ್ಳೆ ಇದ್ದಾರೆ. ಕುಂಬ್ಳೆ 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್ ಪಡೆದಿದ್ದಾರೆ.