ನಾಗ್ಪುರ, ಫೆ 10 (DaijiworldNews/DB): ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರಾ ಜಡೇಜಾ ಅವರು ಬೌಲಿಂಗ್ಗೆ ಸಹಕಾರಿಯಾಗಲು ಮುಲಾಮು ಹಚ್ಚಿಕೊಳ್ಳುತ್ತಿದ್ದಾರೆಂದು ಆಸ್ಟ್ರೇಲಿಯಾ ಮಾಜಿ ಆಟಗಾರರು, ಅಭಿಮಾನಿಗಳು ಮಾಡಿದ್ದ ಆರೋಪಕ್ಕೆ ಇದೀಗ ಬಿಸಿಸಿಐ ಸ್ಪಷ್ಟನೆ ನೀಡಿದೆ.
ಜಡೇಜಾಗೆ ಬೆರಳಿನ ನೋವುಂಟಾಗಿದ್ದರಿಂದ ಅದನ್ನು ಶಮನ ಮಾಡಿಕೊಳ್ಳಲು ಮುಲಾಮು ಹಚ್ಚಿಕೊಂಡಿದ್ದಾರೆಯೇ ಹೊರತು ಬೌಲಿಂಗ್ಗೆ ಸಹಾಯಕವಾಗುವ ಮುಲಾಮುಗಳನ್ನು ಅವರು ಹಚ್ಚಿಕೊಂಡಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಆ ಮೂಲಕ ಆಸ್ಟ್ರೇಲಿಯಾ ತಂಡದವರು ಹರಡಿದ್ದ ಸುಳ್ಳು ಸುದ್ದಿಗಳಿಗೆ ಬಿಸಿಸಿಐ ಬ್ರೇಕ್ ಹಾಕಿದೆ.
ಏನಿದು ಘಟನೆ?
ನಾಗ್ಪುರದಲ್ಲಿ ನಡೆಯುತ್ತಿರುವ ಭಾರತ ವಿರುದ್ದದ ಟೆಸ್ಟ್ನ ಮೊದಲ ದಿನದಂದೇ ಆಸ್ಟ್ರೇಲಿಯಾ ಭಾರತದ ವಿರುದ್ದ ಪರಾಭವಗೊಂಡಿದೆ. ಈ ಸೋಲಿನಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತಂಡದ ಅಭಿಮಾನಿಗಳು, ಮಾಧ್ಯಮಗಳು ಮತ್ತು ಮಾಜಿ ಆಟಗಾರರು ಭಾರತ ತಂಡದ ಆಟಗಾರರ ವಿರುದ್ದ ಆರೋಪಗಳನ್ನು ಸೃಷ್ಟಿಸುತ್ತಿದ್ದಾರೆ. ಆರಂಭದಲ್ಲಿ ಪಿಚ್ ಬಗ್ಗೆ ಅಪಸ್ವರ ಎತ್ತಿದ್ದ ಆಸ್ಟೇಲಿಯಾನ್ನರು ಇದೀಗ ರವೀಂದ್ರ ಜಡೇಜಾ ಬಗ್ಗೆ ಆರೋಪ ಹೊರಿಸಿದ್ದರು.
ರವೀಂದ್ರ ಜಡೇಜಾ ಅವರು ಪಂದ್ಯದ ಎರಡನೇ ಸೆಷನ್ನಲ್ಲಿ ಬೌಲಿಂಗ್ ವೇಳೆ ತಮ್ಮ ಬೆರಳಿಗೆ ಏನೋ ಹಚ್ಚಿಕೊಳ್ಳುತ್ತಿರುವ ವೀಡಿಯೋವನ್ನು ಆಸ್ಟ್ರೇಲಿಯಾದ ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದರು. ಮೊಹಮ್ಮದ್ ಸಿರಾಜ್ ಬಳಿ ಜಡೇಜಾ ಏನೋ ತೆಗೆದುಕೊಂಡು ಬೆರಳಿಗೆ ಉಜ್ಜಿಕೊಳ್ಳುತ್ತಿದ್ದರು. ಅದನ್ನು ಹಿಡಿದುಕೊಂಡು ಆಸ್ಟ್ರೇಲಿಯಾ ಮಾಧ್ಯಮಗಳು, ಮಾಜಿ ಕ್ರಿಕೆಟಿಗರು, ಅಲ್ಲಿನ ಕ್ರಿಕೆಟ್ ಅಭಿಮಾನಿಗಳು ವಿವಿಧ ಮಿಥ್ಯಾರೋಪಗಳನ್ನು ಹೊರಿಸಿದ್ದವು. ಬ್ಯಾಟಿಂಗ್ಗೆ ಸಹಾಯಕವಾಗಲೆಂದೇ ಜಡೇಜಾ ಮುಲಾಮು ಉಜ್ಜಿಕೊಳ್ಳುತ್ತಿದ್ದಾರೆಂದು ಗುಮಾನಿ ಹಬ್ಬಿಸಿದ್ದರು.