ನವದೆಹಲಿ, ಫೆ. 12 (DaijiworldNews/SM): ಐಸಿಸಿ ಮಹಿಳಾ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡವು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.
ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. 2ನೇ ಓವರ್ನಲ್ಲೇ ಜವೇರಿಯಾ ಖಾನ್ (8) ವಿಕೆಟ್ ಪಡೆದು ದೀಪ್ತಿ ಶರ್ಮಾ ಟೀಮ್ ಇಂಡಿಯಾ ಮೊದಲ ಯಶಸ್ಸು ತಂದುಕೊಟ್ಟಿದ್ದರು. ಇದಾದ ಬಳಿಕ ರಾಧಾ ಯಾದವ್ ಮನೀಬಾ (12) ವಿಕೆಟ್ ಪಡೆದರು. ಇದರ ಬೆನ್ನಲ್ಲೇ ನಿದಾ ದಾರ್ ಅವರನ್ನು ಶೂನ್ಯಕ್ಕೆ ಪೂಜಾ ವಸ್ತ್ರಾಕರ್ ಪೆವಿಲಿಯನ್ಗೆ ಕಳುಹಿಸಿದರು.
ಈ ಹಂತದಲ್ಲಿ ಕಣಕ್ಕಿಳಿದ ನಾಯಕಿ ಬಿಸ್ಮಾ ಮರೂಫ್ (68) ಅರ್ಧಶತಕ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ನಾಯಕಿಗೆ ಉತ್ತಮ ಸಾಥ್ ನೀಡಿದ ಆಯೇಷಾ ನಸೀಮ್ ಅಜೇಯ 43 ರನ್ ಬಾರಿಸಿದರು. ಅದರಂತೆ ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಪಾಕಿಸ್ತಾನ್ ತಂಡವು 149 ರನ್ ಕಲೆಹಾಕಿತು.
150 ರನ್ಗಳ ಗುರಿ ಪಡೆದ ಟೀಮ್ ಇಂಡಿಯಾಗೆ ಯಶಿಕಾ ಭಾಟಿಯಾ (17) ಹಾಗೂ ಶಫಾಲಿ ವರ್ಮಾ (33) ಉತ್ತಮ ಆರಂಭ ಒದಗಿಸಿದರು. ಅದರಂತೆ ಮೊದಲ 10 ಓವರ್ಗಳಲ್ಲಿ ಭಾರತ ತಂಡವು 67 ರನ್ ಕಲೆಹಾಕಿತು.
ಈ ಹಂತದಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು 60 ಎಸೆತಗಳಲ್ಲಿ 83 ರನ್ಗಳ ಅವಶ್ಯಕತೆಯಿತ್ತು. ಈ ವೇಳೆ ಜೊತೆಗೂಡಿದ ಹರ್ಮನ್ಪ್ರೀತ್ ಕೌರ್ ಹಾಗೂ ಜೆಮಿಮಾ 28 ರನ್ಗಳ ಜೊತೆಯಾಟವಾಡಿದರು. ಆದರೆ 16 ರನ್ಗಳಿಸಿದ್ದ ವೇಳೆ ಹರ್ಮನ್ ಪ್ರೀತ್ ಕ್ಯಾಚ್ ನೀಡಿ ಹೊರನಡೆದರು.
15 ಓವರ್ ಮುಕ್ತಾಯದ ವೇಳೆಗೆ 3 ವಿಕೆಟ್ ನಷ್ಟಕ್ಕೆ 103 ರನ್ ಕಲೆಹಾಕಿದ್ದ ಟೀಮ್ ಇಂಡಿಯಾಗೆ ಕೊನೆಯ 5 ಓವರ್ಗಳಲ್ಲಿ 47 ರನ್ ಬೇಕಿತ್ತು. ಈ ಹಂತದಲ್ಲಿ ರಿಚಾ ಘೋಷ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ ಕೊನೆಯ 18 ಎಸೆತಗಳಲ್ಲಿ 28 ರನ್ಗಳು ಬೇಕಿತ್ತು. ಅಲ್ಲದೆ 18ನೇ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ ಬಾರಿಸುವ ಮೂಲಕ ರಿಚಾ ಘೋಷ್ ರನ್-ಬಾಲ್ ಅಂತರವನ್ನು ತಗ್ಗಿಸಿದರು. ಅದರಂತೆ ಕೊನೆಯ 2 ಓವರ್ಗಳಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು ಕೇವಲ 14 ರನ್ಗಳ ಅವಶ್ಯಕತೆಯಿತ್ತು.
19ನೇ ಓವರ್ನಲ್ಲಿ ಅಬ್ಬರಿಸಿದ ಜೆಮಿಮಾ ರೋಡಿಗ್ರಸ್ 3 ಫೋರ್ ಬಾರಿಸುವ ಮೂಲಕ ಭಾರತ ತಂಡಕ್ಕೆ 7 ವಿಕೆಟ್ಗಳ ಭರ್ಜರಿ ಜಯ ತಂದುಕೊಟ್ಟರು.