ಬೆಂಗಳೂರು, ಫೆ 15 (DaijiworldNews/DB): ಡಬ್ಲ್ಯುಪಿಎಲ್ 2023ಗೆ ತನ್ನ ಮೆಂಟರ್ ಆಗಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ಆರ್ಸಿಬಿ ತಂಡ ನೇಮಿಸಿಕೊಂಡಿದೆ. ಈ ಬಗ್ಗೆ ಸ್ವತಃ ಆರ್ಸಿಬಿಯೇ ತನ್ನ ಟ್ವಿಟರ್ ಖಾತೆಯಲ್ಲಿ ಬುಧವಾರ ಪ್ರಕಟಿಸಿದೆ.
ಮಹಿಳೆಯರ ಶಕ್ತಿ, ಯುವ ಐಕಾನ್, ವೃತ್ತಿ ಜೀವನದುದ್ದಕ್ಕೂ ಧೈರ್ಯಶಾಲಿಯಾಗಿದ್ದ ಹಾಗೂ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಮೈದಾನದ ಹೊರಗೆ ಮತ್ತು ಒಳಗೆ ಎರಡೂ ಕಡೆ ಚಾಂಪಿಯನ್ ಆದ ಸಾನಿಯಾ ಮಿರ್ಜಾ ಅವರನ್ನು ಆರ್ಸಿಬಿ ಮಹಿಳಾ ಕ್ರಿಕೆಟ್ ತಂಡದ ಮೆಂಟರ್ ಆಗಿ ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಆರ್ಸಿಬಿ ಟ್ವೀಟ್ ಮಾಡಿದೆ.
ಆರು ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ವಿಜೇತೆಯಾಗಿರುವ ಸಾನಿಯಾ ಮಿರ್ಜಾ ಅವರನ್ನು ತನ್ನ ತಂಡದ ಮೆಂಟರ್ ಆಗಿ ನೇಮಿಸಿಕೊಳ್ಳುವ ಮುಖಾಂತರ ದೇಶದ ಪ್ರಸಿದ್ದ ಕ್ರೀಡಾಪಟುಗಳನ್ನು ಐಕಾನ್ ಆಗಿ ನೇಮಕ ಮಾಡಿಕೊಳ್ಳುವ ಸಂಪ್ರದಾಯವನ್ನು ಆರ್ಸಿಬಿ ಮುಂದುವರಿಸಿದೆ.
ಇನ್ನು ಆರ್ಸಿಬಿ ತನ್ನನ್ನು ಮೆಂಟರ್ ಆಗಿ ನೇಮಿಸಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಾನಿಯಾ ಮಿರ್ಜಾ, ಮೆಂಟರ್ ಆಗುವಂತೆ ಕೇಳಿ ಆರ್ಸಿಬಿ ನನ್ನನ್ನು ಸಂಪರ್ಕಿಸಿದಾಗ ನನಗೆ ಆಶ್ಚರ್ಯದ ಜೊತೆಗೆ ಖುಷಿಯೂ ಆಗಿತ್ತು. ಕಳೆದೆರಡು ದಶಕಗಳಿಂದ ವೃತ್ತಿಪರ ಅತ್ಲಿಟ್ ಆಗಿದ್ದ ನಾನು ಇನ್ನು ಮುಂದೆ ಬಾಲಕಿಯರು ಮತ್ತು ಮಹಿಳೆಯರಿಗೆ ಕ್ರೀಡಾ ವೃತ್ತಿ ಕಲಿಸಲು ಪ್ರಯತ್ನಿಸುವ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಸದಾ ಪ್ರೋತ್ಸಾಹಿಸಿ, ಕ್ರೀಡಾ ವೃತ್ತಿಯನ್ನೇ ಮುಂದುವರಿಸುವಂತೆ ಅವರಿಗೆ ಬೆನ್ನೆಲುಬಾಗಿ ನಿಲ್ಲತ್ತೇನೆ ಎಂದಿದ್ದಾರೆ.
ಒತ್ತಡ ನಿಭಾಯಿಸುವುದು ಕ್ರೀಡೆಯಲ್ಲಿ ಅತಿದೊಡ್ಡ ಸವಾಲು. ಒತ್ತಡ ನಿಭಾಯಿಸಿ ಆಡಿದರಷ್ಟೇ ಗೆಲುವು ಸಾಧ್ಯ. ಮಾನಸಿಕವಾಗಿ ಆಟಗಾರ್ತಿಯರನ್ನು ದೃಢಪಡಿಸುವ ಕೆಲಸ ಮಾಡುತ್ತೇನೆ ಎಂದೂ ಅವರು ಹೇಳಿಕೊಂಡಿದ್ದಾರೆ.