ಕೊಚ್ಚಿ, ಮಾ 15 (MSP): ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಿಂದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಿಂದ ಅಜೀವ ನಿಷೇಧ ಶಿಕ್ಷೆಗೆ ಗುರಿಯಾಗಿದ್ದ ಶ್ರೀಶಾಂತ್ ಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ಅಜೀವ ನಿಷೇಧವನ್ನು ದೇಶದ ಸರ್ವೋಚ್ಚ ನ್ಯಾಯಾಲಯ ಸುಪ್ರೀಂ ತೆರವುಗೊಳಿಸಿದ್ದು ಶಿಕ್ಷೆಯ ಪ್ರಮಾಣವನ್ನು ಮೂರು ತಿಂಗಳ ಒಳಗೆ ಪ್ರಕಟ ಮಾಡುವಂತೆ ಬಿಸಿಸಿಐಗೆ ನಿರ್ದೇಶನ ನೀಡಿದೆ.
ಬಿಸಿಸಿಐ ವಿಧಿಸಿದ್ದ ಅಜೀವ ನಿಷೇಧದಿಂದ ಶ್ರೀಶಾಂತ್ ಕೇರಳ ಪರ ರಣಜಿ ಪಂದ್ಯಗಳು ಸೇರಿದಂತೆ ಬಿಸಿಸಿಐನ ಅಧೀನಕ್ಕೆ ಬರುವ ಯಾವುದೇ ಪಂದ್ಯಗಳಲ್ಲಿ ಆಡುವಂತಿರಲಿಲ್ಲ.
ಬಿಸಿಸಿಐ ವಿಧಿಸಿದ್ದ ನಿಷೇಧ ತೆರವುಗೊಳಿಸಬೇಕು ಎಂದು ಶ್ರೀಶಾಂತ್ ಈ ಹಿಂದೆ ಕೇರಳ ಹೈಕೋರ್ಟ್ ನ ಮೊರೆ ಹೋಗಿದ್ದರು . ಆದರೆ ಕೇರಳ ನ್ಯಾಯಾಲಯದ ವಿಭಾಗೀಯ ಪೀಠ ಬಿಸಿಸಿಐನ ಮನವಿಯನ್ನು ಎತ್ತಿಹಿಡಿದಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ನಲ್ಲಿ ಮೇಲ್ವನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ ವಿಭಾಗೀಯ ಪೀಠ, ಶ್ರೀಶಾಂತ್ ಅವರಿಗೆ ವಿಧಿಸಿದ್ದ ಶಿಕ್ಷೆಯ ಪ್ರಮಾಣದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 3 ತಿಂಗಳ ಒಳಗೆ ಮರುಪರಿಶೀಲಿಸಿ ಶಿಕ್ಷೆಯ ಪ್ರಮಾಣ ಪ್ರಕಟಿಸಬೇಕು ಎಂದು ನಿರ್ದೇಶಿಸಿದೆ.