ಮುಂಬೈ, ಫೆ 20 (DaijiworldNews/SM): ಕ್ರಿಕೆಟಿಗ ಪೃಥ್ವಿ ಶಾ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿದ್ದ ನಾಲ್ವರು ಆರೋಪಿಗಳಿಗೆ ನ್ಯಾಯಾಲಯ ಷರತ್ತುಬದ್ದ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ.
ಸೆಲ್ಫಿ ವಿಚಾರವಾಗಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಪೃಥ್ವಿ ಶಾ ಅವರೊಂದಿಗೆ ಗಲಾಟೆ ಮಾಡಿಕೊಂಡಿದ್ದ ಮಾಡೆಲ್ ಸಪ್ನಾ ಗಿಲ್ ಸೇರಿದಂತೆ ಇತರೆ ಮೂರು ಮಂದಿ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ, ಪ್ರಮುಖ ಆರೋಪಿ ಎಣಿಸಿಕೊಂಡಿದ್ದ ಸಪ್ನಾ ಗಿಲ್ ಅವರನ್ನು ನ್ಯಾಯಾಲಯವು ಈ ಹಿಂದೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಆದರೆ ಇದೀಗ ಸಪ್ನಾ ಗಿಲ್ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಅಲ್ಲದೆ ಅವರೊಂದಿಗೆ ಬಂಧಿತರಾಗಿದ್ದ ಇತರೆ 3 ಜನರಿಗೂ ಸಹ ನ್ಯಾಯಾಲಯ ಜಾಮೀನು ನೀಡಿದೆ.
ಈ ಪ್ರಕರಣದಲ್ಲಿ ಪೃಥ್ವಿ ಶಾ ಸ್ನೇಹಿತ ಆಶಿಶ್ ಯಾದವ್ ದೂರು ದಾಖಲಿಸಿದ ನಂತರ, ಓಶಿವಾರ ಪೊಲೀಸರು ಸಪ್ನಾ ಗಿಲ್ ಮತ್ತು ಇತರ 7 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ (143, 148, 149, 384, 437, 504, 506) ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಇನ್ನು ಫೆಬ್ರವರಿ 15 ರಂದು, ಭಾರತೀಯ ಕ್ರಿಕೆಟಿಗ ಪೃಥ್ವಿ ಶಾ ಅವರು ತಮ್ಮ ಕೆಲವು ಸ್ನೇಹಿತರೊಂದಿಗೆ ಮುಂಬೈನ ಸಾಂತಾಕ್ರೂಜ್ ಹೊಟೆಲ್ ಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಸಪ್ನಾ ಗಿಲ್ ಆಗಲೇ ಆ ರೆಸ್ಟೊರೆಂಟ್ನಲ್ಲಿ ಪಾರ್ಟಿ ಮಾಡುತ್ತಿದ್ದ ತನ್ನ ಸ್ನೇಹಿತರೊಂದಿಗೆ ಇದ್ದರು. ಈ ವೇಳೆ ಪೃಥ್ವಿ ಶಾ ಇರುವಿಕೆ ಗಮನಿಸಿದ್ದ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಆದರೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಪೃಥ್ವಿ ಶಾ ಸೆಲ್ಫಿ ತೆಗೆದುಕೊಳ್ಳದಂತೆ ತಡೆದರು. ಈ ವೇಳೆ ಕೋಪಗೊಂಡ ಸಪ್ನಾ ಗಿಲ್ ಮತ್ತು ಆಕೆಯ ಸ್ನೇಹಿತರು ಗಲಾಟೆ ಆರಂಭಿಸಿದ್ದಾರೆ. ಇದು ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಪೃಥ್ವಿ ಶಾ ರೆಸ್ಟೋರೆಂಟ್ ನಿಂದ ಹೊರಗೆ ಬಂದು ಕಾರಿನಲ್ಲಿ ಹೋಗಲು ಮುಂದಾಗಿದ್ದಾರೆ. ಈ ವೇಳೆ ಕಾರನ್ನು ತಡೆದು ಬೇಸ್ ಬಾಲ್ ಸ್ಟಿಕ್ ನಿಂದ ಕಾರಿನ ಮೇಲೆ ಹಲ್ಲೆಗೆ ಮುಂದಾಗಿದ್ದರು.