ನವದೆಹಲಿ, ಮಾ 16(SM): ಕಳೆದ ಫೆಬ್ರವರಿ ತಿಂಗಳ 14 ರಂದು ನಡೆದ ಪುಲ್ವಾಮ ದಾಳಿಯಲ್ಲಿ ವೀರಮರಣವನ್ನಪ್ಪಿದ 40 ವೀರಯೋಧರ ಕುಟುಂಬಗಳಿಗೆ ನೆರವಾಗಲು ಬಿಸಿಸಿಐ ಮುಂದಾಗಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ 20 ಕೋಟಿ ರೂ.ನೀಡಲು ನಿರ್ಧರಿಸಿದೆ.
ಪುಲ್ವಾಮ ಘಟನೆಯಲ್ಲಿ ಪಾಕ್ ಉಗ್ರರ ಅಟ್ಟಹಾಸದಿಂದಾಗಿ ದೇಶದ 40ಕ್ಕೂ ಅಧಿಕ ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ಬಿಸಿಸಿಐ ಐಪಿಎಲ್ ಉದ್ಘಾಟನಾ ಪಂದ್ಯವನ್ನೇ ರದ್ದು ಮಾಡಿದೆ. ಉದ್ಘಾಟನಾ ಪಂದ್ಯಕ್ಕೆ ವೆಚ್ಚ ಮಾಡುವ ಎಲ್ಲಾ ಹಣವನ್ನು ಹುತಾತ್ಮ ಯೋಧರ ಕುಟುಂಬಗಳಿಗೆ ಅರ್ಪಣೆ ಮಾಡಲು ತೀರ್ಮಾನಿಸಲಾಗಿದೆ.
20 ಕೋಟಿ ರೂಗಳನ್ನ ಮಿಲಿಟರಿ ವೆಲ್ಫೇರ್ ನಿಧಿಗೆ ನೀಡುವ ನಿರ್ಧಾರವನ್ನ ಬಿಸಿಸಿಐ ಆಡಳಿತ ಮಂಡಳಿ ತೆಗೆದುಕೊಂಡಿದೆ. ಮಾ.23 ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದೆ.
ಮಾ.23ರಂದು ಚೆನ್ನೈ ಸೂಪರ್ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಪಂದ್ಯ ಆರಂಭಕ್ಕೂ ಮುನ್ನ ಮೂರು ಸೇನಾಪಡೆಗಳ ಹಿರಿಯ ಅಧಿಕಾರಿಗಳನ್ನ ಆಹ್ವಾನಿಸಲಾಗಿದೆ. ಅವರ ಮೂಲಕ 20 ಕೋಟಿ ರೂ. ಚೆಕ್ ಹಸ್ತಾಂತರ ಮಾಡುವುದಾಗಿ ಬಿಸಿಸಿಐ ಹೇಳಿದೆ.