ಅಹ್ಮದಾಬಾದ್, ಮಾ 09 (DaijiworldNews/DB): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್- ಗವಾಸ್ಕರ್ ಟ್ರೋಫಿಯ ಅಂತಿಮ ನಾಲ್ಕನೇ ಟೆಸ್ಟ್ ಪಂದ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಸಾಕ್ಷಿಯಾಗಿದ್ದಾರೆ.
ಈಗಾಗಲೇ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ಆರಂಭಗೊಂಡಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ ಸ್ಮಿತ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು, ಪಂದ್ಯಕ್ಕೆ ಭರ್ಜರಿ ಆರಂಭ ನೀಡಿದ್ದಾರೆ.
ಸದ್ಯ ಭಾರತ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಆಲ್ಬನೀಸ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಡಗೂಡಿ ಪಂದ್ಯ ವೀಕ್ಷಿಸಲು ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಬಂದಿದ್ದಾರೆ. ಎರಡೂ ದೇಶಗಳ ಪ್ರಧಾನಿಗಳು ಕ್ರೀಡಾಂಗಣದಲ್ಲಿರುವುದರಿಂದ ಈ ಪಂದ್ಯವು ಎರಡು ತಂಡಗಳಿಗೂ ಪ್ರತಿಷ್ಠೆಯ ವಿಷಯವಾಗಿದೆ.
ಇನ್ನು ಪಂದ್ಯ ಆರಂಭಕ್ಕೂ ಮುನ್ನ ಇಬ್ಬರು ಪ್ರಧಾನಿಗಳು ಉಭಯ ತಂಡಗಳ ನಾಯಕರಿಗೆ ಟೆಸ್ಟ್ ಕ್ಯಾಪ್ ಹಸ್ತಾಂತರಿಸಿದರು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರಿಗೆ ನರೇಂದ್ರ ಮೋದಿ ಹಾಗೂ ಆಸೀಸ್ ನಾಯಕ ಸ್ಟೀವನ್ ಸ್ಮಿತ್ ಅವರಿಗೆ ಅಲ್ಬನೀಸ್ ಅವರು ಕ್ಯಾಪ್ ಹಸ್ತಾಂತರಿಸಿದರು. ಬಳಿಕ ಇಬ್ಬರು ನಾಯಕರ ಕೈ ಮೇಲಕ್ಕೆತ್ತಿ ಶುಭ ಕೋರಿದರು.