ಅಹ್ಮದಾಬಾದ್, ಮಾ. 13 (DaijiworldNews/SM): ಬಾರ್ಡರ್-ಗವಾಸ್ಕರ್ ಟ್ರೋಫಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನೀರಸ ಡ್ರಾದಲ್ಲಿ ಅಂತ್ಯವಾಗಿದೆ. 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ.
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯ ನಿರೀಕ್ಷೆಯಂತೆಯೇ ಡ್ರಾದಲ್ಲಿ ಅಂತ್ಯವಾಗಿದೆ. ಉಭಯ ತಂಡಗಳಿಂದ ತೀವ್ರ ಪೈಪೋಟಿ ಕಂಡಿದ್ದ ಪಂದ್ಯ ಕೊನೆಗೂ ಡ್ರಾದಲ್ಲಿ ಅಂತ್ಯವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಖವಾಜಾ (188 ರನ್) ಮತ್ತು ಗ್ರೀನ್ (114 ರನ್) ಶತಕಗಳ ನೆರವಿನಿಂದ 480 ರನ್ ಗಳ ಬೃಹತ್ ಮೊತ್ತ ಪೇರಿಸಿತ್ತು.
ಆಸಿಸ್ ಗೆ ತಿರುಗೇಟು ನೀಡಿದ್ದ ಭಾರತ ಕೂಡ ಮೊದಲ ಇನ್ನಿಂಗ್ಸ್ ನಲ್ಲಿ ಶುಭ್ ಮನ್ ಗಿಲ್ (128ರನ್) ಮತ್ತು ವಿರಾಟ್ ಕೊಹ್ಲಿ (186) ಶತಕ ಮತ್ತು ಅಕ್ಸರ್ ಪಟೇಲ್ ರ ಅರ್ಧಶತಕದ ನೆರವಿನಿಂದ 571 ರನ್ ಗಳ ಬೃಹತ್ ಮೊತ್ತ ಕಲೆಹಾಕಿ 91 ರನ್ ಗಳ ಮುನ್ನಡೆ ಪಡೆದಿತ್ತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸ್ಚ್ರೇಲಿಯಾ ತಂಡ 2 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತ್ತು. ಈ ವೇಳೆ ಉಭಯ ತಂಡದ ನಾಯಕರು ಪಂದ್ಯವನ್ನು ಡ್ರಾ ಮಾಡಿಕೊಳ್ಳುವ ಕುರಿತು ಘೋಷಣೆ ಮಾಡಿದರು.