ಹೋಬರ್ಟ್, ಮಾ 19 (DaijiworldNews/DB): ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ವಿಕೆಟ್ ಕೀಪರ್ ಟಿಮ್ ಪೇನ್ ಅವರು ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ.
ಬೆಲ್ಲೆರೀವ್ ಓವಲ್ನಲ್ಲಿ ಕ್ವೀನ್ಸ್ಲ್ಯಾಂಡ್ ವಿರುದ್ದ ನಡೆದ ಶೆಫೀಲ್ಡ್ ಶೀಲ್ಡ್ ಪಂದ್ಯ ಡ್ರಾದಲ್ಲಿ ಮುಗಿದ ಬಳಿಕ ಟಿಮ್ ಪೇನ್ ಅವರು ತಮ್ಮ ಕ್ರಿಕೆಟ್ ಜೀವನವನ್ನು ಇಲ್ಲಿಗೆ ಅಂತ್ಯಗೊಳಿಸುವುದಾಗಿ ಪ್ರಕಟಿಸಿದರು.
ಮೂಲತಃ ಟಾಸ್ಮೇನಿಯಾವರಾದ ಟಿಮ್ ಪೇನ್ ಆಸ್ಟ್ರೇಲಿಯ ಪರ 35 ಟೆಸ್ಟ್ ಪಂದ್ಯ ಆಡಿದ್ದು, ಈ ಪೈಕಿ 23 ಪಂದ್ಯಗಳಿಗೆ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು.
ಸ್ಟೀವನ್ ಸ್ಮಿತ್ ಅವರು 2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಚೆಂಡನ್ನು ವಿರೂಪಗೊಳಿಸಿದ ಆರೋಪದಲ್ಲಿ ನಿಷೇಧಕ್ಕೊಳಗಾಗಿದ್ದರು. ಹೀಗಾಗಿ ಆಸೀಸ್ ನಾಯಕತ್ವದ ಜವಾಬ್ದಾರಿಯನ್ನು ಟಿಮ್ ಪೇನ್ ವಹಿಸಿಕೊಂಡಿದ್ದರು. ಆದರೆ 2021ರಲ್ಲಿ ಸ್ವತಃ ಟಿಮ್ ಪೇನ್ ಅವರ ಮೈಮೇಲೆ ವಿವಾದವೊಂದು ಬಂದ ಕಾರಣ ನಾಲ್ಕು ವರ್ಷಗಳ ಅವಧಿಯಲ್ಲೇ ನಾಯಕತ್ವ ತ್ಯಜಿಸಬೇಕಾಗಿ ಬಂದಿತ್ತು.