ಚೆನ್ನೈ, ಮಾ 22(SM): ಮಾರ್ಚ್ 23ರಿಂದ 12ನೇ ಆವೃತ್ತಿಯ ದೇಸಿಯ ಚುಟುಕು ಕ್ರಿಕೆಟ್ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೇಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿದೆ.
ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕ್ಯಾಪ್ಟನ್ ಧೋನಿ ಉಭಯ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಹಾಲಿ ಹಾಗೂ ಮಾಜಿ ನಾಯಕರ ನಡುವಿನ ಫೈಟ್ ಇದಾಗಲಿದೆ.
ಮೊದಲ ಪಂದ್ಯದಲ್ಲಿ ಗೆಲುವು ದಾಖಲು ಮಾಡಿ ಶುಭಾರಂಭ ಮಾಡಬೇಕ್ಕೆನ್ನುವ ತವಕ ಇಬ್ಬರು ನಾಯಕರಲ್ಲೂ ಇದೆ. ಮೊದಲ ಆವೃತ್ತಿಯಿಂದಲೂ ಆರ್ಸಿಬಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ಆದರೆ, ಅದೃಷ್ಟ ದೇವಿ ಮಾತ್ರ ಇಲ್ಲಿಯವರೆಗೆ ಬೆಂಗಳೂರು ತಂಡದ ಕೈ ಹಿಡಿದಿಲ್ಲ. ಇದುವರೆಗೂ ಕಪ್ ಮಾತ್ರ ಮುಡಿಗೇರಿಸಿಕೊಳ್ಳುವಲ್ಲಿ ಆರ್ ಸಿಬಿ ಯಶಸ್ವಿಯಾಗಿಲ್ಲ. ಆದರೆ ಸಿಎಸ್ಕೆ ಈಗಾಗಲೇ ಮೂರು ಬಾರಿ ಕಪ್ ಗೆದ್ದಿದೆ.
12ನೇ ಆವೃತ್ತಿಯಲ್ಲಾದರೂ ಪ್ರಶಸ್ತಿ ಗೆಲ್ಲಬೇಕೆನ್ನುವ ಆಸೆಯನ್ನು ಆರ್ ಸಿಬಿ ಜೀವಂತವಾಗಿರಿಸಿದ್ದು, ಇದು ಈಡೇರುತ್ತಾ ಅನ್ನೋದು ಸದ್ಯದ ಕುತೂಹಲವಾಗಿದೆ.
ಇನ್ನು ಈಗಾಗಲೇ ನಿರ್ಧಾರವಾಗಿರುವಂತೆ ಉದ್ಘಾಟನಾ ಪಂದ್ಯ ಸಾಧಾರಣವಾಗಿಯೇ ನಡೆಯಲಿದ್ದು, ಹುತಾತ್ಮ ಯೋಧರ ಕುಟುಂಬಗಳಿಗೆ ನೆರವಾಗುವ ನಿಟ್ಟಿನಲ್ಲಿ ಯಾವುದೇ ಆಡಂಬರ ನಡೆಸುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ.