ಕೋಲ್ಕತ್ತಾ, ಮಾ28(SS): ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಚಾಂಪಿಯನ್ಶಿಪ್ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕೆಕೆಆರ್ 28 ರನ್ ಅಂತರದ ರೋಚಕ ಜಯ ಸಾಧಿಸಿದೆ.
ಪಂಜಾಬ್ ಈ ಆವೃತ್ತಿಯಲ್ಲಿ ಮೊದಲ ಬಾರಿಗೆ ಸೋಲು ಕಂಡಿದೆ. ಕೆ.ಕೆ.ಆರ್ ಆಡಿರುವ ಎರಡೂ ಹೋಂ ಪಿಚ್ ಪಂದ್ಯಗಳಲ್ಲಿ ಜಯ ಸಾಧಿಸಿದಂತಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ್ದ ಕೆಕೆಆರ್ ಪರ ರಾಬಿನ್ ಉತ್ತಪ್ಪ (67), ನಿತೀಶ್ ರಾಣಾ (63) ಹಾಗೂ ಆಂಡ್ರೆ ರಸೆಲ್ (48), ಸುನೀಲ್ ನರೇನ್ (24), ನೆರವಿನಿಂದ ನಿಗದಿತ 20.0 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 218 ರನ್ ಬೃಹತ್ ಮೊತ್ತ ಕಲೆ ಹಾಕಿತ್ತು.
ಕೆಕೆಆರ್ ಗುರಿ ಬೆನ್ನತ್ತಿದ ಕಿಂಗ್ಸ್ ಇಲೆವೆನ್ ಪಂಜಾಬ್ ಪರವಾಗಿ ಮಯಾಂಕ್ ಅಗರ್ವಾಲ್ (58), ಮನದೀಪ್ ಸಿಂಗ್ (33), ಡೇವಿಡ್ ಮಿಲ್ಲರ್ (59) ಉತ್ತಮ ರನ್ ಪ್ರದರ್ಶನ ನೀಡಿದ್ದರು. ಆದರೆ ನಿಗದಿತ ಅವಧಿಯೊಳಗೆ 190 ರನ್ ಗಳಿಸಲಷ್ಟೇ ಸಾಧ್ಯವಾಗಿದೆ.
ಕ್ರಿಸ್ ಗೇಲ್ ತಲಾ ಎರಡು ಬೌಂಡರಿ ಹಾಗೂ ಸಿಕ್ಸರ್ ಸಿಡಿಸಿ ಅಪಾಯಕಾರಿ ಎನಿಸಿಕೊಂಡರೂ ಹೆಚ್ಚು ಹೊತ್ತು ಸಾಗಲಿಲ್ಲ. ಅಲ್ಲದೆ ಆಂಡ್ರೆ ರಸೆಲ್ ದಾಳಿಗೆ ಬಲಿಯಾದರು. 13 ಎಸೆತಗಳನ್ನು ಎದುರಿಸಿದ ಗೇಲ್ 20 ರನ್ ಗಳಿಸಿದರು. ಸರ್ಫರಾಜ್ಖಾನ್ (13) ಅವರಿಗೂ ಹೆಚ್ಚು ಹೊತ್ತು ನಿಲ್ಲಲಾಗಲಿಲ್ಲ. ನಿರಂತರ ಅಂತರಾಳದಲ್ಲಿ ವಿಕೆಟುಗಳನ್ನು ಕಳೆದುಕೊಂಡಿರುವುದು ಕಿಂಗ್ಸ್ ರನ್ ಚೇಸಿಂಗ್ಗೆ ಹಿನ್ನಡೆಯಾಗಿ ಪರಿಣಮಿಸಿತು.
ಮೊದಲು ಬೌಲಿಂಗ್ ಗೆ ಇಳಿದಿದ್ದ ಪ್ಂಜಾಬ್ ಪರವಾಗಿ ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಹರ್ಡೂಸ್ ಹಾಗೂ ಆಂಡ್ರೂ ಟೈ ತಲಾ ಒಂದೊಂದು ವಿಕೆಟ್ ಪಡೆದರೆ ಕೋಲ್ಕತ್ತಾ ಪರವಾಗಿ ಲೂಕಿ ಫರ್ಗ್ಯೂಸನ್ ಹಾಗೂ ಕುಲದೀಪ್ ಯಾದವ್ ತಲಾ ಎರಡು, ಪ್ರಸಿದ್ಧ್ ಕೃಷ್ಣ ಒಂದು ವಿಕೆಟ್ ಪಡೆದಿದ್ದರು.