ಮುಂಬೈ, ಜೂ 02 (DaijiworldNews/SM): ಟೀಂ ಇಂಡಿಯಾದ ಮಾಜಿ ಕಪ್ತಾನ ಹಾಗೂ ಐದನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಯವರ ಮೊಣಕಾಲಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.
ಗುರುವಾರ ಮುಂಬೈನ ಪ್ರಸಿದ್ಧ ಆಸ್ಪತ್ರೆಯಲ್ಲಿ ಎಡ ಮೊಣಕಾಲಿನ ಚಿಕಿತ್ಸೆಗೆ ಒಳಗಾಗಿದ್ದಾರೆ. ಬಿಸಿಸಿಐ ವೈದ್ಯಕೀಯ ಸಮಿತಿಯ ಸದಸ್ಯರೂ ಆಗಿರುವ ಖ್ಯಾತ ಮೂಳೆ ಶಸ್ತ್ರಚಿಕಿತ್ಸಕ ಡಾ. ದಿನ್ಶಾ ಪರ್ದಿವಾಲಾ ಅವರು ಧೋನಿ ಅವರಿಗೆ ಮುಂಬೈ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸಿದರು. ಅವರು ಆರೋಗ್ಯವಾಗಿದ್ದು, ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿದ್ದು ಬಳಿಕ ಬಿಡುಗಡೆಯಾಗಲಿದ್ದಾರೆ. ಇನ್ನು ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 5ನೇ ಐಪಿಎಲ್ ಪ್ರಶಸ್ತಿ ಗೆಲ್ಲಲು ಮಾಹಿ ನಾಯಕತ್ವ ಪ್ರಮುಖ ಪಾತ್ರ ವಹಿಸಿತ್ತು. ಐಪಿಎಲ್ ಫೈನಲ್ ಪಂದ್ಯದ ನಂತರ ಅಹಮದಾಬಾದ್ನಿಂದ ಮುಂಬೈಗೆ ಪ್ರಯಾಣಿಸಿದ್ದರು. ಐಪಿಎಲ್ ಉದ್ದಕ್ಕೂ ಧೋನಿ ಎಡ ಮೊಣಕಾಲಿನ ನೋವಿನೊಂದಿಗೆ ಆಡಿದ್ದರು. ಅವರ ವಿಕೆಟ್ ಕೀಪಿಂಗ್ ಕೌಶಲ್ಯ ಅತ್ಯುತ್ತಮವಾಗಿದ್ದರೆ, ಅವರ ಬ್ಯಾಟಿಂಗ್ ಪ್ರದರ್ಶನದ ಮೇಲೆ ಈ ನೋವು ಪರಿಣಾಮಬೀರಿತ್ತು. ಅವರು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ವಿಕೆಟ್ ನಡುವೆ ಓಡಲು ಅವರಿಗೆ ಕಷ್ಟವಾಗುತ್ತಿತ್ತು. ಆದರೂ ತಂಡಕ್ಕಾಗಿ ಆಡಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಬಳಿಕವೇ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.