ಹೈದರಾಬಾದ್, ಮಾ 31(SM): ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಪಿಎಲ್ ನ 11ನೇ ಪಂದ್ಯದಲ್ಲಿ ರನ್ ಮಳೆಯೇ ಸುರಿದಿದೆ. ಮೊದಲು ಬ್ಯಾಟಿಂಗ್ ಮಾಡಿದ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ 232 ರನ್ ಗಳ ಬೃಹತ್ ಮೊತ್ತದ ಗುರಿ ನೀಡಿದೆ.
ಹೈದರಾಬಾದ್ ಪರ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಜಾನಿ ಬೇರ್ಸ್ಟೊವ್ ಇಬ್ಬರೂ ಸ್ಫೋಟಕ ಶತಕ ಬಾರಿಸುವ ಮೂಲಕ ಈ ಪಂದ್ಯದಲ್ಲಿ ಗಮನ ಸೆಳೆದಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಸನ್ ರೈಸರ್ಸ್ ಹೈದರಾಬಾದ್ಗೆ ವಾರ್ನರ್, ಬೇರ್ಸ್ಟೊವ್ ಭರ್ಜರಿ ಜೊತೆಯಾಟ ನೀಡಿದರು. ಬೇರ್ಸ್ಟೊವ್ 56 ಎಸೆತಗಳನ್ನು ಎದುರಿಸಿ 114 ರನ್ ಗಳನ್ನು ಸಿಡಿಸಿದರೆ, ವಾರ್ನರ್ 55 ಎಸೆತಗಳಲ್ಲಿ ಅಜೇಯ 100 ರನ್ ಬಾರಿಸಿ ಮಿಂಚಿದರು. ಇಬ್ಬರೂ 2019ರ ಐಪಿಎಲ್ನಲ್ಲಿ ಕ್ರಮವಾಗಿ 2ನೇ ಮತ್ತು 3ನೇ ಶತಕ ದಾಖಲಿಸಿದ್ದಾರೆ.
ಅಂತಿಮವಾಗಿ ಎಸ್ಆರ್ಎಚ್ ತಂಡ 20 ಓವರ್ ಗಳಲ್ಲಿ 2 ವಿಕೆಟ್ ಕಳೆದು 231 ರನ್ ಬಾರಿಸಿತು. ಇದು 2019ರ ಐಪಿಎಲ್ ಆವೃತ್ತಿಯಲ್ಲಿ ತಂಡವೊಂದು ಇನ್ನಿಂಗ್ಸ್ ಒಂದರಲ್ಲಿ ದಾಖಲಿಸಿದ ಅತ್ಯಧಿಕ ರನ್ ಆಗಿದೆ. ಹೈದರಬಾದ್ ತಂಡ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ ಸಿಬಿಗೆ ಆರಂಬಿಕ ಆಘಾತ ಉಂಟಾಗಿದೆ.