ಮುಂಬೈ, ಜು 05 (DaijiworldNews/SM): ಭಾರತ ತಂಡದ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಅವರನ್ನು ಬಿಸಿಸಿಐ ಆಯ್ಕೆ ಸಮಿತಿಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಈ ಹಿಂದಿನ ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ರಾಜಿನಾಮೆ ನೀಡಿದ್ದು, ಆ ಬಳಿಕ ತೆರವಾಗಿದ್ದ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ 45 ವರ್ಷದ ಅಗರ್ಕರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ.
ಆಯ್ಕೆ ಸಮಿತಿ ಮುಖ್ಯಸ್ಥರ ಸ್ಥಾನಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಅದರಲ್ಲಿ ಅಂತಿಮ ಪಟ್ಟಿಯನ್ನು ರಚಿಸಲಾಗಿತ್ತು. ಸುಲಕ್ಷಣ ನಾಯಕ್, ಅಶೋಕ್ ಮಲ್ಹೋತ್ರಾ ಮತ್ತು ಜತಿನ್ ಪರಾಂಜಪೆ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು ಅಭ್ಯರ್ಥಿಗಳ ಸಂದರ್ಶನ ನಡೆಸಿದ ಬಳಿಕ ಅಜಿತ್ ಅಗರ್ಕರ್ ಅವರನ್ನು ಈ ಸ್ಥಾನಕ್ಕೆ ನೇಮಿಸಲಾಗಿದೆ. ಆ ಮೂಲಕ ಅಗರ್ಕರ್, ಶಿವಸುಂದರ್ ದಾಸ್, ಸಲೀಲ್ ಅಂಕೋಲಾ, ಸುಬ್ರೋತೊ ಬ್ಯಾನರ್ಜಿ ಮತ್ತು ಎಸ್ ಶರತ್ ಸೇರಿದಂತೆ ಐದು ಸದಸ್ಯರ ಸಮಿತಿಯನ್ನು ಒಳಗೊಂಡಿರುವ ತಂಡವನ್ನು ಸೇರಿಕೊಳ್ಳಲಿದ್ದು, ಆಯ್ಕೆ ಸಮಿತಿಯನ್ನು ಮುನ್ನಡೆಸಲಿದ್ದಾರೆ.