ಮುಂಬೈ, ಜು 27(DaijiworldNews/SM):ಐಸಿಸಿ ಏಕದಿನ ಟೂರ್ನಿಗೆ ಸಿದ್ಧತೆ ನಡೆಸಿರುವ ಟೀಂ ಇಂಡಿಯಾಗೆ ಸಿಹಿಸುದ್ದಿಯೊಂದು ಲಭಿಸಿದ್ದು, ಗಾಯದ ಸಮಸ್ಯೆಯಿಂದ ತಂಡದಿಂದ ದೂರ ಉಳಿದಿದ್ದ ತಂಡದ ಸ್ಟಾರ್ ವೇಗಿ ಜಸ್ ಪ್ರೀತ್ ಬುಮ್ರಾ ಇದೀಗ ಫಿಟ್ ಆಗಿದ್ದಾರೆ ಎಂದು ತಿಳಿದುಬಂದಿದೆ.
ವಿಶ್ವಕಪ್ ಸಿದ್ದತೆ ನಡೆಸಿರುವ ಟೀಂ ಇಂಡಿಯಾಗೆ ಸ್ಟಾರ್ ಆಟಗಾರರ ಫಿಟ್ನೆಸ್ ದೊಡ್ಡ ತಲೆನೋವಾಗಿದ್ದು, ತಂಡದ ಪ್ರಮುಖ ಆಟಗಾರರಾದ ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಅವರು ಗಾಯಗೊಂಡಿದ್ದು, ಹಲವು ಸಮಯದಿಂದ ತಂಡಕ್ಕೆ ಲಭ್ಯವಾಗುತ್ತಿಲ್ಲ. ಹೀಗಿರುವಾಗಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಸಿಹಿಸುದ್ದಿಯೊಂದನ್ನು ನೀಡಿದ್ದು, ವೇಗಿ ಜಸ್ಪ್ರಿತ್ ಬುಮ್ರಾ ಅವರ ಫಿಟ್ನೆಸ್ ಬಗ್ಗೆ ಮಹತ್ವದ ಅಪ್ಡೇಟ್ ಕೊಟ್ಟಿದ್ದಾರೆ
ಬುಮ್ರಾ ಅವರು ಸಂಪೂರ್ಣ ಫಿಟ್ ಆಗಿದ್ದು, ಮುಂದಿನ ಐರ್ಲೆಂಡ್ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂದಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರು ಬೆನ್ನು ನೋವಿನ ಕಾರಣದಿಂದ ಹಲವು ಸಮಯದಿಂದ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಸಂಪೂರ್ಣ ವೇಗದಲ್ಲಿ ಬೌಲಿಂಗ್ ಮಾಡುವ ಬಗ್ಗೆ ಕೆಲ ದಿನಗಳ ಹಿಂದೆ ಬಿಸಿಸಿಐ ಮಾಹಿತಿ ನೀಡಿತ್ತು. ಇದೀಗ ಬುಮ್ರಾ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಹೇಳಲಾಗಿದೆ.