ನವದೆಹಲಿ, ಆ 02 (DaijiworldNews/SM): ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿ ಜಯದ ಖುಷಿಯಲ್ಲಿರುವ ಟೀಂ ಇಂಡಿಯಾ ಇದೀಗ ಅತಿಥೇಯ ವಿಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸ್ವತಃ ಟೀಂ ಇಂಡಿಯಾ ನಾಯಕ ಹಾರ್ದಿಕ್ ಪಾಂಡ್ಯ ವಿಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಂಡಕ್ಕೆ ಲಭ್ಯವಾಗುತ್ತಿರುವ ಕಳಪೆ ಆತಿಥ್ಯದ ಬಗ್ಗೆ ಕಿಡಿಕಾರಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ತಂಡದ ಆಟಗಾರರಿಗೆ ಸಾಮಾನ್ಯ ವ್ಯವಸ್ಥೆಗಳನ್ನೂ ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ ಸ್ಟೇಡಿಯಂನಲ್ಲಿ ಮಂಗಳವಾರ (ಆಗಸ್ಟ್ 1) ನಡೆದ ಏಕದಿನ ಕ್ರಿಕೆಟ್ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಅಧಿಕಾರಯುತ ಆಟವಾಡಿದ ಹಾರ್ದಿಕ್ ಪಾಂಡ್ಯ ಸಾರಥ್ಯದ ಭಾರತ ತಂಡ 200 ರನ್ಗಳ ಭಾರಿ ಅಂತರದಲ್ಲಿ ಆತಿಥೇಯ ವಿಂಡೀಸ್ ತಂಡವನ್ನು ಮಣಿಸಿ, 2-1 ಅಂತರದಲ್ಲಿ ಸರಣಿ ಗೆದ್ದುಕೊಂಡಿದೆ.
ಈ ಪಂದ್ಯದ ಬಳಿಕ ಮಾತನಾಡಿದ ನಾಯಕ ಪಾಂಡ್ಯ, 'ಪ್ರವಾಸಿ ತಂಡಕ್ಕೆ ಲಭ್ಯವಾಗುತ್ತಿರುವ ಕಳಪೆ ಆತಿಥ್ಯದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಸಾಮಾನ್ಯ ವ್ಯವಸ್ಥೆಗಳನ್ನು ಒದಗಿಸಲು ವಿಫಲವಾಗಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸಮಸ್ಯೆಗಳನ್ನು ಈ ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.