ಟ್ರಿನಿಡಾಡ್, ಆ 04 (DaijiworldNews/SM): ಟ್ರಿನಿಡಾಡ್ನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಮೊದಲ ಟಿ20 ಅಂತರಾಷ್ಟ್ರೀಯ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಭಾರತದ ವಿರುದ್ಧ ನಾಲ್ಕು ರನ್ ಗಳ ರೋಚಕ ಗೆಲುವು ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ತಂಡ, ನಿಕೋಲಸ್ ಪೂರನ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.
ನಿಕೋಲಸ್ ಪೂರನ್ 34 ಎಸೆತಗಳಲ್ಲಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್ ನೆರವಿನಿಂದ 41 ರನ್ ಬಾರಿಸಿ ಹಾರ್ದಿಕ್ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ರೋವ್ಮನ್ ಪೊವೆಲ್ 32 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ 48 ರನ್ ಗಳಿಸಿ ಅರ್ಶ್ದೀಪ್ ಸಿಂಗ್ ಬೌಲಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ಗೆ ಕ್ಯಾಚ್ ನೀಡಿದರು.
ಗೆಲುವಿಗೆ 150 ರನ್ ಗಳ ಗುರಿ ಬೆನ್ನತ್ತಿದ ಹಾರ್ದಿಕ್ ಪಾಂಡ್ಯ ನಾಯಕತ್ವದ ಟೀಂ ಇಂಡಿಯಾ, ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 145 ರನ್ ಗಳಿಸುವ ಮೂಲಕ ವಿಂಡೀಸ್ ವಿರುದ್ಧ ಸೋಲು ಒಪ್ಪಿಕೊಂಡಿತು.
ಟೀಂ ಇಂಡಿಯಾ ಪರ 3 ಓವರ್ಗಳಲ್ಲಿ 24 ರನ್ ನೀಡಿ ಯುಜ್ವೇಂದ್ರ ಚಹಲ್ 2 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ 4 ಓವರ್ಗಳಲ್ಲಿ 31 ರನ್ ನೀಡಿ 2 ವಿಕೆಟ್ ಕಬಳಿಸಿದರು.
ಖಾಯಂ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಕಣಕ್ಕಿಳಿದ ಭಾರತ ತಂಡ ಕಳಪೆ ಬ್ಯಾಟಿಂಗ್ನಿಂದಾಗಿ ಸೋಲು ಕಂಡಿದೆ