ಮುಂಬೈ, ಏ 07(SM): ಈ ಬಾರಿಯ ಐಪಿಎಲ್ನಲ್ಲಿ ಆಡಿರುವ 6 ಪಂದ್ಯಗಳಲ್ಲೂ ಸೋಲುಂಡಿರುವ ಆರ್ಸಿಬಿ ತಂಡ ಟೂರ್ನಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಈ ಹಿನ್ನೆಲೆ ನಾಯಕ ಕೊಹ್ಲಿಯನ್ನು ವಿಶ್ವಕಪ್ ತಂಡಕ್ಕೆ ನಾಯಕನನ್ನಾಗಿ ಮಾಡುವುದು ಬೇಡ ಎಂಬ ಮಾತುಗಳು ಸೋಷಿಯಲ್ ಮೀಡಿಯಾಗಳಲ್ಲಿ ಕೇಳಿಬರುತ್ತಿವೆ.
ಸತತ 6ನೇ ಸೋಲುಂಡಿರುವ ಆರ್ಸಿಬಿ ಐಪಿಎಲ್ನಲ್ಲಿ ಕೊನೆಯ ಸ್ಥಾನದಲ್ಲಿದೆ. ನಾಯಕತ್ವದಲ್ಲಿ ಪದೇಪದೆ ಕೊಹ್ಲಿ ವೈಫಲ್ಯ ಎದ್ದು ಕಾಣುತಿದೆ. ತಂಡದ ಆಯ್ಕೆ, ಫೀಲ್ಡಿಂಗ್ ಸಂಯೋಜನೆಯಲ್ಲಿ ಕೊಹ್ಲಿ ಎಡವಟ್ಟು ಮಾಡುತ್ತಿದ್ದು, ಈ ಹಿನ್ನೆಲೆ ಕೊಹ್ಲಿಗೆ ಭಾರತ ತಂಡದ ನಾಯಕತ್ವ ನೀಡುವ ಬದಲು ಮುಂಬೈ ತಂಡದ ನಾಯಕನಾಗಿರುವ ರೋಹಿತ್ ಶರ್ಮಾಗೆ ನೀಡಬೇಕು ಎಂದು ಟ್ವಿಟರ್ನಲ್ಲಿ ಅಭಿಮಾನಿಗಳು ಬೇಡಿಕೆಯಿಡುತ್ತಿದ್ದಾರೆ.
ಮುಂಬೈ ತಂಡ ಶನಿವಾರ ಹೈದರಾಬಾದ್ನಂತಹ ಬಲಿಷ್ಠ ತಂಡಕ್ಕೆ 137 ರನ್ಗಳ ಟಾರ್ಗೆಟ್ ನೀಡಿ 40 ರನ್ಗಳಿಂದ ಗೆಲುವು ಸಾಧಿಸಿತ್ತು. ಕಡಿಮೆ ರನ್ ಟಾರ್ಗೆಟ್ ನೀಡಿದರೂ ರೋಹಿತ್ ಶರ್ಮಾ ತನ್ನ ನಾಯಕತ್ವವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ತಮ್ಮ ಕ್ಷೇತ್ರ ರಕ್ಷಣೆ ಸಂಯೋಜನೆ, ಬೌಲರ್ಗಳ ಆಯ್ಕೆಯಿಂದ ತಂಡಕ್ಕೆ ಗೆಲುವು ದೊರೆಕಿಸಿಕೊಟ್ಟಿದ್ದರು. ಆದರೆ, ಕೊಹ್ಲಿ ತಂಡ 200 ರನ್ಗಳಿಸಿದರೂ ಪಂದ್ಯ ಗೆಲ್ಲಲು ವಿಫಲವಾಗುತ್ತಿದೆ. ನಿರಂತರ ಸೋಲುಗಳಿಂದ ಕೊಹ್ಲಿ ಮೇಲೆ ಒತ್ತಡ ಹೆಚ್ಚಾಗಿದೆ.
ಇದು ಮುಂಬರುವ ವಿಶ್ವಕಪ್ ಪಂದ್ಯದಲ್ಲಿ ಭಾರತಕ್ಕೆ ನೇರವಾರ ಪರಿಣಾಮ ಬೀರಲಿದೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರು ಟ್ವಿಟ್ ಮಾಡುತ್ತಿದ್ದಾರೆ