ಮುಂಬೈ, ಆ 19 (DaijiworldNews/AK): ಭಾರತ ಮತ್ತು ಐರ್ಲೆಂಡ್ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಚೊಚ್ಚಲ ಟಿ20 ಪಂದ್ಯವನ್ನಾಡಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಮೊದಲ ಪಂದ್ಯದಲ್ಲಿ 2 ವಿಕೆಟ್ ಉರುಳಿಸಿ, ಟಿ20 ತಂಡಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ.
ಹಿಂದೆಯೇ ಭಾರತ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದ ಪ್ರಸಿದ್ಧ್ ಕೃಷ್ಣ, ಇಂಜುರಿಯಿಂದಾಗಿ ವರ್ಷದಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದರು. ಇದೀಗ ನಾಯಕ ಜಸ್ಪ್ರೀತ್ ಬುಮ್ರಾ ಜೊತೆಗೆ ಭರ್ಜರಿ ಕಂಬ್ಯಾಕ್ ಮಾಡಿರುವ ಪ್ರಸಿದ್ಧ್ ಕೃಷ್ಣ, ನಾನು ಕೂಡ ಏಷ್ಯಾಕಪ್ ಹಾಗೂ ವಿಶ್ವಕಪ್ಗೆ ತಂಡದಲ್ಲಿ ಸ್ಥಾನ ಪಡೆಯಲು ಸ್ಪರ್ಧಿ ಎಂಬ ಸುಳಿವನ್ನು ಆಯ್ಕೆ ಮಂಡಳಿಗೆ ನೀಡಿದ್ದಾರೆ.
ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ಇಬ್ಬರು ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ನೀಡಲಾಯಿತು. ಅವರಲ್ಲಿ ರಿಂಕು ಸಿಂಗ್ ಹಾಗೂ ಪ್ರಸಿದ್ಧ್ ಕೃಷ್ಣ ಸೇರಿದ್ದರು. ಒಂದೆಡೆ ಬೌಲಿಂಗ್ನಲ್ಲಿ ಪ್ರಸಿದ್ಧ್ ಕೃಷ್ಣ ಮಿಂಚಿದರೆ, ರಿಂಕು ಸಿಂಗ್ಗೆ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಸಿಗಲಿಲ್ಲ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಬುಮ್ರಾ ಮೊದಲು ಬೌಲಿಂಗ್ ಮಾಡುವ ನಿರ್ಧರಿಸಿದರು. ಹೀಗಾಗಿ ಬೌಲಿಂಗ್ ಮಾಡುವ ಅವಕಾಶ ಪಡೆದ ಪ್ರಸಿದ್ಧ್ ಕೃಷ್ಣ 2 ವಿಕೆಟ್ ಉರುಳಿಸಿ ಆಯ್ಕೆ ಮಂಡಳಿಯ ನಂಬಿಕೆ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.