ನವದೆಹಲಿ, ಆ 22 (DaijiworldNews/SM): , ಭಾರತೀಯ ಕ್ರಿಕೆಟ್ ದಂತಕಥೆ ಹಾಗೂ ಭಾರತ ರತ್ನ ಸಚಿನ್ ತೆಂಡೂಲ್ಕರ್ ಅವರು ಹೊಸ ಇನ್ನಿಂಗ್ಸ್ ಆರಂಭಿಸಲು ಸಿದ್ದರಾಗಿದ್ದಾರೆ. ಮತದಾರರ ಜಾಗೃತಿ ಮತ್ತು ಮತದಾನದ ಕುರಿತು ಜನರಲ್ಲಿ ಅರಿವು ಮೂಡಿಸಲು ಭಾರತದ ಚುನಾವಣಾ ಆಯೋಗದ ರಾಷ್ಟ್ರೀಯ ಐಕಾನ್ ಆಗಿ ಬುಧವಾರ ಹೊಸ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ.
ಮೂರು ವರ್ಷಗಳ ಕಾಲ ಮತದಾರರ ಜಾಗೃತಿ ರಾಯಭಾರಿಯಾಗಿ ಇರಲು ತೆಂಡೂಲ್ಕರ್ ಅವರೊಂದಿಗೆ ಬುಧವಾರ ತಿಳುವಳಿಕೆ ಪತ್ರಕ್ಕೆ ಸಹಿ ಹಾಕುವುದಾಗಿ ಭಾರತೀಯ ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.
ಸಹಯೋಗವು ಮುಂಬರುವ ಚುನಾವಣೆಗಳಲ್ಲಿ, ವಿಶೇಷವಾಗಿ 2024 ರ ಲೋಕಸಭೆ ಚುನಾವಣೆಯಲ್ಲಿ ಮತದಾರರ ಭಾಗವಹಿಸುವಿಕೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಲಿದೆ. ಯುವ ಜನರಲ್ಲಿ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತೆಂಡೂಲ್ಕರ್ ವರ್ಚಸ್ಸು ಮಹತ್ವದ ಪರಿಣಾಮ ಬೀರಲಿದೆ. ಈ ಪಾಲುದಾರಿಕೆಯ ಮೂಲಕ ಸಾಮಾನ್ಯ ನಾಗರೀಕರು, ಯುವಕರು ಮತ್ತು ನಗರ ಜನಸಂಖ್ಯೆಯ ನಡುವಿನ ಮತದಾನದ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ನಗರದ ಜನತೆ ಮತ್ತು ಯುವ ಜನತೆಯ ನಿರಾಸಕ್ತಿಯ ಸವಾಲುಗಳನ್ನು ಎದುರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.