ಹೈದರಾಬಾದ್, ಏ 09(SM): 2019 ರ ಐಪಿಎಲ್ ನ 12ನೇ ಆವೃತ್ತಿಯಲ್ಲಿ ಆರ್ ಸಿಬಿಯ ಅದೃಷ್ಟ ಚೆನ್ನಾಗಿಲ್ಲ ಎನ್ನುವುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ತಂಡವನ್ನು ಎಷ್ಟೇ ಬಲಿಷ್ಟಗೊಳಿಸಿದರೂ, ಗೆಲುವು ಮಾತ್ರ ತಂಡಕ್ಕೆ ಕನಸಿನ ಮಾತು. ಇದೀಗ ೭ನೇ ಪಂದ್ಯ ಏಪ್ರಿಲ್ 13ರಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಎದುರು ನಡೆಯಲಿದೆ. ಆದರೆ ಒಂದೊಮ್ಮೆ ಇಲ್ಲೂ ಕೂಡ ಸೋಲುಂಡರೆ ಕೆಟ್ಟದೊಂದು ದಾಖಲೆಯನ್ನು ಬರೆಯಲಿದೆ.
ಏಪ್ರಿಲ್ 7ರಂದು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯದಲ್ಲೂ ಆರ್ಸಿಬಿ ಎಲ್ಲ ವಿಭಾಗದಲ್ಲೂ ವೈಫಲ್ಯ ಅನುಭವಿಸಿ ಆರನೇ ಸೋಲನ್ನು ಕಂಡಿತು. ಆರು ಪಂದ್ಯ ಸೋತಿರುವ ಆರ್ಸಿಬಿ ಮುಂದಿನ ಪಂದ್ಯ ಸೋತರೆ ಕೆಟ್ಟ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆಯಲಿದೆ. ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡ ಸತತ ಏಳು ಪಂದ್ಯಗಳನ್ನು ಸೋತಿಲ್ಲ.
2013ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಸತತ ಆರು ಪಂದ್ಯಗಳಲ್ಲಿ ಸೋಲಿನ ಕಹಿ ಉಂಡಿತ್ತು. ಈ ಬಾರಿ ಆರ್ಸಿಬಿ ಆ ದಾಖಲೆಯನ್ನು ಸರಿಗಟ್ಟಿದೆ. ಇನ್ನುಳಿದಂತೆ 2012ರಲ್ಲಿ ಡೆಕ್ಕನ್ ಚಾರ್ಜರ್ಸ್, 2014ರಲ್ಲಿ ಮುಂಬೈ ಇಂಡಿಯನ್ಸ್ ಸತತ ಐದು ಪಂದ್ಯ ಕೈಚೆಲ್ಲಿತ್ತು. ಕಳೆದ ಆವೃತ್ತಿಯನ್ನೂ ಪರಿಗಣಿಸಿದರೆ ಆರ್ಸಿಬಿ ಈಗಾಗಲೇ ಸತತ ಏಳು ಪಂದ್ಯಗಳನ್ನು ಸೋತಿದೆ.
ಕಳೆದ ಆವೃತ್ತಿಯ ತನ್ನ ಕೊನೆಯ ಪಂದ್ಯದಲ್ಲಿ ಕೊಹ್ಲಿ ಪಡೆ ರಾಜಸ್ಥಾನ ರಾಯಲ್ಸ್ ವಿರುದ್ಧ 30 ರನ್ಗಳಿಂದ ಸೋಲನುಭವಿಸಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಏ.13ರಂದು ತನ್ನ ಮುಂದಿನ ಪಂದ್ಯವನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಜೊತೆಗೆ ಆಡಲಿದೆ. ನಿರಂತರ ಕಹಿಯುಂಡಿರುವ ಆರ್ಸಿಬಿ ತಂಡ ಈ ಪಂದ್ಯ ಗೆಲ್ಲಬಹುದೆಂಬ ವಿಶ್ವಾಸ ಕ್ರೀಡಾಭಿಮಾನಿಗಳದ್ದು.
ಏಳನೇ ಪಂದ್ಯದಲ್ಲಾದರೂ ಅಭಿಮಾನಿಗಳ ನಿರೀಕ್ಷೆಯನ್ನು ಕೋಹ್ಲಿ ಪಡೆ ಉಳಿಸುತ್ತಾ ಅನ್ನುವುದು ಸದ್ಯದ ಕುತೂಹಲ.