ನವದೆಹಲಿ, ಆ 30 (DaijiworldNews/SM): ಏಷ್ಯಾಕಪ್ನ ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ಪಾಕಿಸ್ತಾನ ತಂಡ ಶುಭಾರಂಭ ಮಾಡಿದೆ. ಮುಲ್ತಾನ್ನ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಬಾಬರ್ ಆಝಂ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ನೇಪಾಳ ಬೌಲರ್ಗಳು ನೀಡಿದರು.
ನೇಪಾಳ ತಂಡವು ಮೊದಲ 10 ಓವರ್ಗಳಲ್ಲಿ ಅತ್ಯದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಆರಂಭಿಕರಾದ ಫಖರ್ ಝಮಾನ್(14) ಹಾಗೂ ಇಮಾಮ್ ಉಲ್ ಹಕ್(5) ವಿಕೆಟ್ ಪಡೆಯುವ ಮೂಲಕ ಪಾಕ್ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದರು. ಅಷ್ಟೇ ಅಲ್ಲದೆ ಮೊದಲ ಓವರ್ಗಳಲ್ಲಿ ನೀಡಿದ್ದು ಕೇವಲ 44 ರನ್ಗಳು ಮಾತ್ರ.
ಪಾಕಿಸ್ತಾನ್ ತಂಡವು ಆರಂಭಿಕ ಆಘಾತಕ್ಕೆ ಒಳಗಾದರೂ ಆ ಬಳಿಕ ಕಣಕ್ಕಿಳಿದ ಬಾಬರ್ ಆಝಂ ಹಾಗೂ ಇಫ್ತಿಕರ್ ಅಹ್ಮದ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಇನ್ನು 4ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಹಮ್ಮದ್ ರಿಝ್ವಾನ್ 44 ರನ್ಗಳ ಕೊಡುಗೆ ನೀಡಿದರು. ಆದರೆ ಕೇವಲ 4 ರನ್ಗೆ ವಿಕೆಟ್ ಒಪ್ಪಿಸಿ ಆಘಾ ಸಲ್ಮಾನ್ ನಿರಾಸೆ ಮೂಡಿಸಿದರು.
ಐದನೇ ವಿಕೆಟ್ಗೆ ಜೊತೆಯಾದ ಬಾಬರ್ ಆಝಂ ಹಾಗೂ ಇಫ್ತಿಕರ್ ಬರೋಬ್ಬರಿ 214 ರನ್ಗಳ ಜೊತೆಯಾಟವಾಡಿದರು. ಈ ವೇಳೆ ಬಾಬರ್ ಆಝಂ 109 ಎಸೆತಗಳಲ್ಲಿ ಶತಕ ಪೂರೈಸಿದರು. ಶತಕದ ಬಳಿಕ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಬಾಬರ್ 131 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 151 ರನ್ ಬಾರಿಸಿ ನಿರ್ಗಮಿಸಿದರು.
ಬಾಬರ್ ಆಝಂ ಔಟಾಗುತ್ತಿದ್ದಂತೆ ಮತ್ತೊಂದೆಡೆ ಇಫ್ತಿಕ್ ಅಹ್ಮದ್ ಅಬ್ಬರ ಶುರು ಮಾಡಿದ್ದರು. ಕೇವಲ 67 ಎಸೆತಗಳಲ್ಲಿ ಶತಕ ಪೂರೈಸಿದ ಇಫ್ತಿಕರ್ ತಂಡದ ಮೊತ್ತವನ್ನು 300 ರ ಗಡಿದಾಟಿಸಿದರು. ಅಷ್ಟೇ ಅಲ್ಲದೆ 71 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 11 ಫೋರ್ಗಳೊಂದಿಗೆ ಅಜೇಯ 109 ರನ್ ಬಾರಿಸಿ ತಂಡದ ಮೊತ್ತವನ್ನು 6 ವಿಕೆಟ್ ನಷ್ಟಕ್ಕೆ 342 ಕ್ಕೆ ತಂದು ನಿಲ್ಲಿಸಿದರು.
343 ರನ್ಗಳ ಕಠಿಣ ಗುರಿ ಪಡೆದ ನೇಪಾಳ ತಂಡವು ಶಾಹೀನ್ ಅಫ್ರಿದಿಯ ಮೊದಲ ಓವರ್ನಲ್ಲೇ 2 ವಿಕೆಟ್ ಕಳೆದುಕೊಂಡಿತು. ಇನ್ನು 2ನೇ ಓವರ್ನಲ್ಲಿ ನಸೀಮ್ ಶಾ 3ನೇ ಯಶಸ್ಸು ತಂದುಕೊಟ್ಟರು. ಈ ಆರಂಭಿಕ ಆಘಾತದಿಂದ ನೇಪಾಳ ತಂಡವು ಚೇತರಿಸಿಕೊಳ್ಳಲೇ ಇಲ್ಲ ಎನ್ನಬಹುದು.
ಏಕೆಂದರೆ 2 ವಿಕೆಟ್ ಕಬಳಿಸುವ ಮೂಲಕ ಹ್ಯಾರಿಸ್ ರೌಫ್ ನೇಪಾಳ ತಂಡದ ಮಧ್ಯಮ ಕ್ರಮಾಂಕಕ್ಕೆ ಶಾಕ್ ನೀಡಿದರು. ಇದಾಗ್ಯೂ ನೇಪಾಳ ಪರ ಆರಿಫ್ ಶೇಖ್ 26 ರನ್ಗಳಿಸಿದರೆ, ಸೋಂಪಲ್ 28 ರನ್ಗಳ ಕೊಡುಗೆ ನೀಡಿದರು.
ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ ಶಾದಾಬ್ ಖಾನ್ ಕೆಳ ಕ್ರಮಾಂಕದ ಬ್ಯಾಟರ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಇದರೊಂದಿಗೆ ನೇಪಾಳ ತಂಡವು 23.4 ಓವರ್ಗಳಲ್ಲಿ 104 ರನ್ಗಳಿಸಿ ಆಲೌಟ್ ಆಯಿತು. ಇತ್ತ 238 ರನ್ಗಳ ಭರ್ಜರಿ ಜಯದೊಂದಿಗೆ ಪಾಕಿಸ್ತಾನ್ ಶುಭಾರಂಭ ಮಾಡಿದೆ.