ನವದೆಹಲಿ, ಸೆ 06 (DaijiworldNews/SM): ಲಾಹೋರ್ನ ಗಡಾಫಿ ಸ್ಟೇಡಿಯಂನಲ್ಲಿ ನಡೆದ ಏಷ್ಯಾ ಕಪ್ 2023ರ ಪಂದ್ಯದಲ್ಲಿ ಸೂಪರ್ 4 ಹಂತದ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವು ಬಾಂಗ್ಲಾದೇಶ ತಂಡದ ವಿರುದ್ಧ 7 ವಿಕೆಟ್ಗಳ ಸುಲಭ ಗೆಲುವು ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಬಾಂಗ್ಲಾದೇಶ ತಂಡ 38.4 ಓವರ್ಗಳಲ್ಲಿ 193 ರನ್ಗಳಿಗೆ ಆಲೌಟ್ ಆಗಿತ್ತು. 194 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ 39.3 ಓವರ್ಗಳಲ್ಲಿ 3 ಕಳೆದುಕೊಂಡು ಗೆಲುವಿನ ದಡ ತಲುಪಿತು.
ಪಾಕಿಸ್ತಾನ ತಂಡದ ಬ್ಯಾಟಿಂಗ್ ಇನ್ನಿಂಗ್ಸ್ ಆರಂಭಿಸಿದ ಫಖರ್ ಜಮಾನ್ 31 ಎಸೆತಗಳಲ್ಲಿ 3 ಬೌಂಡರಿ ಸಮೇತ 20 ರನ್ ಗಳಿಸಿ ಔಟಾದರು. ಇಮಾಮ್-ಉಲ್-ಹಕ್ ಉತ್ತಮವಾಗಿ ಆಡಿ 84 ಎಸೆತಗಳಲ್ಲಿ 5 ಬೌಂಡರಿ ಮತ್ತು 4 ಸಿಕ್ಸರ್ ಮೂಲಕ 78 ರನ್ ಬಾರಿಸಿದರು.
ನಾಯಕ ಬಾಬರ್ ಅಜಂ 22 ಎಸೆತಗಳಲ್ಲಿ 17 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ 79 ಎಸೆತಗಳಲ್ಲಿ 7 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ ಅಜೇಯ 63 ರನ್ ಗಳಿಸಿದರೆ, ಅಘಾ ಸಲ್ಮಾನ್ ಅಜೇಯ 12 ರನ್ ಗಳಿಸಿದರು.
ಬಾಂಗ್ಲಾದೇಶ ತಂಡದ ಪರ ಬೌಲಿಂಗ್ನಲ್ಲಿ ತಸ್ಕಿನ್ ಅಹ್ಮದ್, ಶೋರಿಫುಲ್ ಇಸ್ಲಾಂ, ಮೆಹಿದಿ ಹಸನ್ ಮಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು. ಇದಕ್ಕೂ ಮುನ್ನ ಬ್ಯಾಟಿಂಗ್ ಆಯ್ಕೆ ಮಾಡಿದ್ದ ಬಾಂಗ್ಲಾದೇಶ ತಂಡ 38.4 ಓವರ್ಗಳಲ್ಲಿ 193 ರನ್ಗಳಿಗೆ ಸರ್ವಪತನ ಕಂಡಿತು. ಪಾಕಿಸ್ತಾನ ತಂಡದ ಮಾರಕ ಬೌಲಿಂಗ್ ದಾಳಿಗೆ ಪತರುಗುಟ್ಟಿದ ಬಾಂಗ್ಲಾದೇಶ ತಂಡ, ದೊಡ್ಡ ಮೊತ್ತ ಪೇರಿಸುವಲ್ಲಿ ಸಂಕಷ್ಟ ಎದುರಿಸಿತು. ತಂಡದ ಖಾತೆ ತೆರೆಯುವ ಮುನ್ನವೇ ಮೆಹದಿ ಹಸನ್ ಮಿರಾಜ್ ಅವರನ್ನು ನಸೀಮ್ ಶಾ ಪೆವಿಲಿಯನ್ಗೆ ಕಳಿಸಿದರು. ನಂತರ ಬಂದ ಲಿಟ್ಟನ್ ದಾಸ್ ಅಬ್ಬರಿಸುವ ಮುನ್ಸೂಚನೆ ತೋರಿಸಿದರೂ, 16 ರನ್ ಗಳಿಸಿದ್ದಾಗ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದರು.