ನವದೆಹಲಿ, ಸೆ. 08 (DaijiworldNews/SM): ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿ ಆಯೋಜನೆ ಕುರಿತ ಹಗ್ಗಜಗ್ಗಾಟ ಈಗಲೂ ಮುಂದುವೆರೆದಿದ್ದು, ಕೊನೆಗೂ ಬಿಸಿಸಿಐ ಮನವೊಲಿಸುವಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿ ಭಾರತ-ಪಾಕ್ ಪಂದ್ಯಕ್ಕೆ ಮೀಸಲು ದಿನಕ್ಕೆ ಅನುಮೋದನೆ ಪಡೆದಿದೆ.
ಪಂದ್ಯಾವಳಿ ಆರಂಭದ ತಿಂಗಳುಗಳ ಮೊದಲೇ ಆರಂಭವಾಗಿದ್ದ ಕ್ರಿಕೆಟ್ ಮಂಡಳಿಗಳ ನಡುವಿನ ಹಗ್ಗಜಗ್ಗಾಟ ಟೂರ್ನಿ ಆರಂಭವಾಗಿ ಇದೀಗ ನಿರ್ಣಾಯಕ ತಲುಪಿರುವ ಈ ಹೊತ್ತಿನಲ್ಲೂ ಮುಂದುವರೆದಿದೆ. ಹಾಲಿ ಏಷ್ಯಾಕಪ್ ಟೂರ್ನಿಗೆ ಮಳೆರಾಯ ವಿಲನ್ ಆಗಿದ್ದು, ಪ್ರಮುಖ ಪಂದ್ಯಗಳಿಗೇ ಮಳೆ ಅಡ್ಡಿಯಾಗುತ್ತಿದೆ. ಹೀಗಾಗಿ ಈ ಸಂಬಂಧ ಮೊದಲಿನಿಂದಲೂ ಚರ್ಚೆ ನಡೆಸುತ್ತಿದ್ದ ಕ್ರಿಕೆಟ್ ಮಂಡಳಿಗಳು ಇದೀಗ ಟೂರ್ನಿಯ ಸೂಪರ್ ಫೋರ್ ಹಂತದ ನಿರ್ಣಾಯಕ ಘಟ್ಟದಲ್ಲಿ ಮೀಸಲು ದಿನಗಳನ್ನು ಇರಿಸಲು ತಾರ್ಕಿಕ ಒಪ್ಪಂದಕ್ಕೆ ಬಂದಿವೆ. ಪ್ರಮುಖವಾಗಿ ಇಡೀ ಟೂರ್ನಿಯ ಹೈವೋಲ್ಟೇಜ್ ಪಂದ್ಯ ಎಂದೇ ಹೇಳಲಾಗುತ್ತಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಮೀಸಲು ದಿನ ಇಡಲು ಬಿಸಿಸಿಐ ಮನವೊಲಿಸುವಲ್ಲಿ ಕೊನೆಗೂ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿದೆ.