ಬೀಜಿಂಗ್,ಸೆ 24 (DaijiworldNews/AK): 19ನೇ ಏಷ್ಯನ್ ಕ್ರೀಡಾಕೂಟ ಚೀನಾದ ಹಾಂಗ್ಝೌನಲ್ಲಿ ನಡೆಯುತ್ತಿದ್ದು, ಮೊದಲ ದಿನ ವಿವಿಧ ಕ್ರೀಡೆಗಳಲ್ಲಿ ಭಾರತಕ್ಕೆ 3 ಬೆಳ್ಳಿ ಹಾಗೂ 2 ಕಂಚಿನ ಪದಕಗಳು ಬಂದಿವೆ.
ಮಹಿಳೆಯರ ಶೂಟಿಂಗ್ ವಿಭಾಗದಲ್ಲಿ ಇಂದು ಭಾರತವು ಮೊದಲ ಪದಕದೊಂದಿಗೆ ಖಾತೆ ತೆರೆಯಿತು. 10 ಮೀ ಏರ್ ರೈಫಲ್ ಶೂಟಿಂಗ್ನಲ್ಲಿ ಭಾರತದ ಮಹಿಳಾ ತಂಡವು ಬೆಳ್ಳಿ ಪದಕ ಜಯಿಸಿದೆ. ಮೆಹುಲಿ ಘೋಷ್, ರಮಿತಾ ಮತ್ತು ಆಶಿ ಚೌಕ್ಸೆ ಪದಕಕ್ಕೆ ಮುತ್ತಿಟ್ಟರು. ಒಟ್ಟು 1,886 ಅಂಕ ಗಳಿಸುವ ಮೂಲಕ ಚೀನಾದ ನಂತರ 2ನೇ ಸ್ಥಾನ ಗಳಿಸಿದ್ದಾರೆ.
ರೋಯಿಂಗ್: ಲೈಟ್ವೇಟ್ ಪುರುಷರ ಡಬಲ್ ಸ್ಕಲ್ಸ್ನಲ್ಲಿ ಅರ್ಜುನ್ ಲಾಲ್ ಜಾಟ್ ಮತ್ತು ಅರವಿಂದ್ ಸಿಂಗ್ ಜೋಡಿ 6:28.18 ಸೆಕೆಂಡ್ಗಳಲ್ಲಿ ಗುರಿ ತಲುಪಿ ಬೆಳ್ಳಿ ಗೆದ್ದರು.
ರೋಯಿಂಗ್, ಪುರುಷರ ಜೋಡಿ: ಲೇಖ್ ರಾಮ್ ಮತ್ತು ಬಾಬು ಲಾಲ್ ಯಾದವ್ ಜೋಡಿಯು 6:50.41 ಸೆಕೆಂಡುಗಳಲ್ಲಿ ಗುರಿ ತಲುಪಿ ಕಂಚಿನ ಪದಕ ತನ್ನದಾಗಿಸಿಕೊಂಡರು. ಆ ಮೂಲಕ ಭಾರತಕ್ಕೆ ಮೂರನೇ ಪದಕ ತಂದುಕೊಟ್ಟರು.
ರೋಯಿಂಗ್: ರೋಯಿಂಗ್ನಲ್ಲಿ ಪದಕದ ಭರಾಟೆ ಮುಂದುವರಿಸಿದ ಭಾರತವು ಈ ಬಾರಿ ಪುರುಷರ ಎಂಟರ ಸ್ಪರ್ಧೆಯಲ್ಲಿ ಮತ್ತೊಂದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತು.
ಶೂಟಿಂಗ್: ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಯುವ ಶೂಟರ್ ರಮಿತಾ ಜಿಂದಾಲ್ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದಾರೆ. 19 ವಯಸ್ಸಿನ ರಮಿತಾ 230.1 ಅಂಕದೊಂದಿಗೆ ಮೂರನೇ ಸ್ಥಾನ ಗಳಿಸಿದ್ದಾರೆ.
ಮಹಿಳಾ ಕ್ರಿಕೆಟ್ನಲ್ಲಿ ಬಾಂಗ್ಲಾದೇಶದ ವಿರುದ್ಧ 8 ವಿಕೆಟ್ ಜಯ ಸಾಧಿಸಿದ ಭಾರತ ಫೈನಲ್ ಪ್ರವೇಶಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾ 51 ರನ್ಗಳಿಗೆ ಆಲೌಟ್. ಭಾರತ 8.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 52 ರನ್ ಹೊಡೆಯುವ ಮೂಲಕ ಜಯ ಗಳಿಸಿತು.
ಶ್ರೀಲಂಕಾ ಮತ್ತು ಪಾಕಿಸ್ತಾನದ ಮಧ್ಯೆ ಇಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ವಿಜೇತರಾದವರ ಜೊತೆ ಭಾನುವಾರ ಫೈನಲ್ ಪಂದ್ಯ ನಡೆಯಲಿದೆ.