ಬೆಂಗಳೂರು, ಅ 18 (DaijiworldNews/RA): ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಾಕಿಸ್ತಾನ ತಂಡ ಶುಕ್ರವಾರ ಆಸ್ಟ್ರೇಲಿಯದೊಂದಿಗೆ ವಿಶ್ವಕಪ್ ಪಂದ್ಯವನ್ನು ಆಡಲಿದೆ. ಆದರೆ ಇದಕ್ಕೂ ಮೊದಲೇ ಪಾಕ್ ಆಟಗಾರರಿಗೆ ವೈರಲ್ ಜ್ವರ ಕಾಡಿರುವ ಸುದ್ದಿ ಆತಂಕಕ್ಕೆ ಕಾರಣವಾಗಿದೆ.
ಮೂಲಗಳ ಪ್ರಕಾರ ಪಾಕಿಸ್ತಾನದ ನಾಲ್ವರು ಕ್ರಿಕೆಟಿಗರಾದ ಶಾಹೀನ್ ಶಾ ಅಫ್ರಿದಿ, ಶಫೀಕ್ ಅಬ್ದುಲ್ಲ, ಜಮಾನ್ ಖಾನ್ ಮತ್ತು ಉಸಾಮ ಮಿರ್ ಎಂಬವರು “ವೈರಲ್ ಫಿವರ್’ ಬಾಧೆಗೆ ಸಿಲುಕಿದ್ದಾರೆ.
ಇನ್ನು ವೈರಲ್ ಜ್ವರದ ಸೂಚನೆ ಲಭಿಸಿ ತಕ್ಷಣ ಶಾಹಿನ್ ಶಾ ಅಫ್ರಿದಿ ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾರೆ. ಉಳಿದ ಮೂವರ ಸ್ಥಿತಿ ಅಷ್ಟೊಂದು ಆಶಾದಾಯಕವಾಗಿಲ್ಲ ಎಂಬ ಮಾಹಿತಿ ಇದೆ.
ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲರೂ ಕ್ವಾರಂಟೈನ್ನಲ್ಲಿದ್ದಾರೆ. ಆದರೆ ಇದು ಡೆಂಗ್ಯೂ ಅಲ್ಲ ಎಂಬುದು ಸಾಬೀತಾಗಿದೆ. ಎಲ್ಲರ ವೈದ್ಯಕೀಯ ಪರೀಕ್ಷೆಯ ವರದಿಯಲ್ಲೂ ನೆಗೆಟಿವ್ ಫಲಿತಾಂಶ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪಾಕಿಸ್ಥಾನ ತಂಡದ ಮಾಧ್ಯಮ ವ್ಯವಸ್ಥಾಪಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ..