ಹ್ಯಾಂಗ್ಝೌ, ಅ 26 (DaijiworldNews/MS): ಏಷ್ಯನ್ ಪ್ಯಾರಾ ಗೇಮ್ಸ್ ಮೂರನೇ ದಿನದ ಸ್ಪರ್ಧೆಗಳಲ್ಲಿ ಭಾರತ ಪದಕಗಳ ಸಾಧನೆ 30ಕ್ಕೆ ತಲುಪಿದೆ. ಕರ್ನಾಟಕದ ಮೂಡಿಗೆರೆಯ ಕ್ರೀಡಾಪಟು ರಕ್ಷಿತಾ ರಾಜು ಕೂಡ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಬುಧವಾರ ನಡೆದ ಟಿ-11 ಸ್ಪರ್ಧೆಯಲ್ಲಿ 5 ನಿಮಿಷ 21.45 ಸೆಕೆಂಡ್ಗಳಲ್ಲಿ ಗುರಿ ತಲುಪಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಇನ್ನು ಇದೇ ಸ್ಪರ್ಧೆಯಲ್ಲಿ ಭಾರತದವರೇ ಆದ ಕಿಲ್ಲಕ ಲಲಿತಾ ಎರಡನೇ ಸ್ಥಾನವನ್ನು ಪಡೆದುಕೊಂಡು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಹಾಲಿ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಸುಮಿತ್ ಆಂಟಿಲ್ ಅವರು ಜಾವೆಲಿನ್ ಥ್ರೋ ಎಫ್64 ವಿಶ್ವ ದಾಖಲೆಯನ್ನು 73.29 ಮೀಟರ್ಗಳ ಪ್ರಯತ್ನದೊಂದಿಗೆ ಚಿನ್ನ ಗೆಲ್ಲುವ ಹಾದಿಯನ್ನು ಸುಲಭ ಮಾಡಿಕೊಂಡಿದ್ದಾರೆ.
ಚೀನಾ 300 ಪದಕಗಳೊಂದಿಗೆ (118 ಚಿನ್ನ, 96 ಬೆಳ್ಳಿ, 86 ಕಂಚು) ಅಗ್ರಸ್ಥಾನದಲ್ಲಿ ಮುಂದುವರಿದಿದೆ, ಇರಾನ್ (24, 30, 19), ಜಪಾನ್ (20, 21, 28), ಥಾಯ್ಲೆಂಡ್ (20, 13 , 30), ಮತ್ತು ಉಜ್ಬೇಕಿಸ್ತಾನ್ (17, 17, 21)ನಂತರದ ಸ್ಥಾನದಲ್ಲಿದೆ.