ಮುಂಬೈ, ನ 07 (DaijiworldNews/AA) : ಇಂದು ಮುಂಬೈನ ನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯಾ ಹಾಗೂ ಅಫ್ಘಾನಿಸ್ತಾನ್ ನಡುವಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ಆಟಗಾರ ಇಬ್ರಾಹಿಂ ಝದ್ರಾನ್ ಅವರು ಭರ್ಜರಿ ಶತಕ ಸಿಡಿಸಿದ್ದಾರೆ.
ಈ ಮೂಲಕ ಕಿಂಗ್ ಕೊಹ್ಲಿ ಅವರನ್ನು ಹಿಂದಿಕ್ಕಿ ನಾಲ್ಕನೇ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ್ ನ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಇಬ್ರಾಹಿಂ ಝದ್ರಾನ್ 143 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಭರ್ಜರಿ 129 ರನ್ ಗಳಿಸಿದ್ದಾರೆ.ಈ ಶತಕದೊಂದಿಗೆ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಏಕದಿನ ವಿಶ್ವಕಪ್ನಲ್ಲಿ ಶತಕ ಬಾರಿಸಿದ ನಾಲ್ಕನೇ ಕಿರಿಯ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
2011ರ ಏಕದಿನ ವಿಶ್ವಕಪ್ನಲ್ಲಿ 22 ವರ್ಷದ ವಿರಾಟ್ ಕೊಹ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿ, ಏಕದಿನ ವಿಶ್ವಕಪ್ನಲ್ಲಿ ಸೆಂಚುರಿ ಬಾರಿಸಿ ನಾಲ್ಕನೇ ಕಿರಿಯ ಬ್ಯಾಟ್ಸಮನ್ ಎಂದೆನಿಸಿಕೊಂಡಿದ್ದರು. ಇದೀಗ ಇಬ್ರಾಹಿಂ ಝದ್ರಾನ್ ತಮ್ಮ 21ನೇ ವಯಸ್ಸಿನಲ್ಲಿ 129 ರನ್ ಪಡೆಯುವ ಮೂಲಕ ಕೊಹ್ಲಿಯನ್ನು ಹಿಂದಿಕ್ಕಿ 4ನೇ ಸ್ಥಾನಕ್ಕೇರಿದ್ದಾರೆ.
ಇದಲ್ಲದೇ ಏಕದಿನ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಇಬ್ರಾಹಿಂ ಝದ್ರಾನ್ ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಇನ್ನು ಇಂದು ನಡೆದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವು 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 291 ರನ್ ಗಳಿಸಿತ್ತು. ಬಳಿಕ ಆಸ್ಟ್ರೇಲಿಯಾ ತಂಡವು 46.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸುವ ಮೂಲಕ ಜಯ ತನ್ನದಾಗಿಸಿಕೊಂಡಿದೆ.