ಬೆಂಗಳೂರು: ನ 12 (DaijiworldNews/MR): ನೆದರ್ಲ್ಯಾಂಡ್ಸ್ ವಿರುದ್ಧದ ಕ್ರಿಕೆಟ್ ವಿಶ್ವಕಪ್ ಲೀಗ್ ಹಂತದ ಕೊನೆಯ ಪಂದ್ಯಕ್ಕೆ ಮುಂಚಿತವಾಗಿ ಭಾರತ ತಂಡದ ಆಟಗಾರರು ಬೆಂಗಳೂರಿನಲ್ಲಿ ದೀಪಾವಳಿ ಆಚರಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ, ಶುಭ್ಮನ್ ಗಿಲ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಸೇರಿದಂತೆ ಭಾರತ ಕ್ರಿಕೆಟ್ ಆಟಗಾರರು ನ.11 ರಂದು ಬೆಳಕಿನ ಹಬ್ಬವನ್ನು ಸಡಗರದಿಂದ ಆಚರಿಸಿಕೊಂಡರು.
ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ತನ್ನ ಪತ್ನಿ ರಿತಿಕಾ ಸಜ್ದೆ ಅವರೊಂದಿಗೆ ಕುರ್ತಾದಲ್ಲಿ ಸುಂದರವಾಗಿ ಕಾಣುತ್ತಿರುವ ಚಿತ್ರವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.ಕೊಹ್ಲಿ ಹಾಗೂ ಅನುಷ್ಕಾ ಕೂಡ ಸಾಂಪ್ರದಾಯಿಕ ಉಡುಗೆಯಲ್ಲಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಇದಕ್ಕೂ ಮುನ್ನ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದೀಪಾವಳಿಯ ಹಬ್ಬದ ಹಿನ್ನೆಲೆಯಲ್ಲಿ ಮುಂಬೈನ ಐತಿಹಾಸಿಕ ಗೇಟ್ ವೇ ಆಫ್ ಇಂಡಿಯಾದಲ್ಲಿ ವಿಶೇಷ 3 ಡಿ ಪ್ರದರ್ಶನ ಆಯೋಜಿಸಿತ್ತು. ಬೆಳಕು ಮತ್ತು ಧ್ವನಿಯ ಪ್ರದರ್ಶನದೊಂದಿಗೆ ಎರಡು ನಿಮಿಷಗಳ ಲೈಟಿಂಗ್ ಅನ್ನು ಪ್ರದರ್ಶಿಸಲಾಯಿತು.ಕ್ರಿಕೆಟ್ ವಿಶ್ವಕಪ್ನ ಕೆಲವು ಅತ್ಯುತ್ತಮ ಮತ್ತು ಶ್ರೇಷ್ಠ ಕ್ಷಣಗಳನ್ನು ಪ್ರದರ್ಶಿಸಲಾಯಿತು.
ಟೀಮ್ ಇಂಡಿಯಾ ವಿಶ್ವಕಪ್ ನಲ್ಲಿ ಒಳ್ಳೆಯ ಫಾರ್ಮ್ ನಲ್ಲಿದೆ. ಇದುವರೆಗಿನ ಎಲ್ಲಾ 8 ಪಂದ್ಯಗಳನ್ನು ಭಾರತ ಗೆದ್ದಿದ್ದು, ವಿಶ್ವಕಪ್ ಸೆಮಿಫೈನಲ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಮುಂದಾಗಿದೆ.