ಸಿಡ್ನಿ, ನ 13 (DaijiworldNews/MR): ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯ ಆರಂಭಕ್ಕೆ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿದೆ. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಮುಖಾಮುಖಿಯಾಗಲಿದೆ.
ನ.16ರಂದು ನಡೆಯುವ ದ್ವಿತೀಯ ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೆಣಸಾಡಲಿದೆ. ಇದಕ್ಕೂ ಮುನ್ನವೇ ಆಸ್ಟ್ರೇಲಿಯಾ ವಿಶ್ವಕಪ್ ತಂಡವೊಂದನ್ನು ಪ್ರಕಟಿಸಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿದ ವಿಶ್ವಕಪ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕ. ಆದರೆ ಅಚ್ಚರಿ ವಿಷಯ ಅಂದರೆ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ ಈ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಆರಂಭಿಕನಾಗಿ ಕ್ವಿಂಟನ್ ಡಿ ಕಾಕ್ ಮತ್ತು ಡೇವಿಡ್ ವಾರ್ನರ್ ಕಾಣಿಸಿಕೊಂಡಿದ್ದಾರೆ. ನ್ಯೂಜಿಲ್ಯಾಂಡ್ ತಂಡದಿಂದ ಏಕೈಕ ಆಟಗಾರನಾಗಿ ರಚಿನ್ ರವೀಂದ್ರ ಸ್ಥಾನ ಪಡೆದುಕೊಂಡಿದ್ದಾರೆ. ತಂಡದಲ್ಲಿ ಬಹು ಪಾಲು ಭಾರತೀಯರೇ ಕಾಣಿಸಿಕೊಂಡಿದ್ದು, ಒಟ್ಟು 4 ಮಂದಿ ಸ್ಥಾನ ಪಡೆದಿದ್ದಾರೆ.
ಇನ್ನು ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ತಂಡದಲ್ಲಿ ಕ್ವಿಂಟನ್ ಡಿ ಕಾಕ್, ಡೇವಿಡ್ ವಾರ್ನರ್, ರಚಿನ್ ರವೀಂದ್ರ, ವಿರಾಟ್ ಕೊಹ್ಲಿ, ಐಡೆನ್ ಮಾರ್ಕ್ರಮ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕೊ ಜಾನ್ಸೆನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಆ್ಯಡಂ ಜಂಪಾ, ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದುಕೊಂಡಿದ್ದಾರೆ.