ಅಹಮದಾಬಾದ್, ನ 17(DaijiworldNews/SK): ಐಸಿಸಿ ವಿಶ್ವಕಪ್ 2023ರ ಫೈನಲ್ ಪಂದ್ಯ ಇದೇ ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ವಿಶ್ವಕಪ್ ಸಮಾರೋಪ ಸಮಾರಂಭದಲ್ಲಿ ಭಾರತೀಯ ವಾಯುಸೇನೆಯಿಂದ ಏರ್ಶೋ ಕೂಡ ನಡೆಯುವ ಬಗ್ಗೆ ವರದಿಯಾಗಿದೆ.
ವಿಶ್ವಕಪ್ ಫೈನಲ್ ಪಂದ್ಯ ಆತಿಥೇಯ ತಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದ್ದು, ಈ ಪಂದ್ಯಾಟ ಪ್ರೇಕ್ಷಕರ ಪಾಲಿಗೆ ಬಹಳ ಸ್ಮರಣೀಯವಾಗಿರಬೇಕೆಂಬ ನಿಟ್ಟಿನಲ್ಲಿ ತಯಾರಿ ನಡೆಸಲಾಗುತ್ತಿದೆ.
ಬುಧವಾರ ಮುಂಬೈನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ದ ಭರ್ಜರಿ ಜಯ ಸಾಧಿಸಿ ವಿಶ್ವಕಪ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಫೈನಲ್ಗೆ ಪ್ರವೇಶಿಸಿದೆ. ಈ ಹಿನ್ನಲೆಯಲ್ಲಿ ಸಮಾರೋಪವನ್ನು ಭರ್ಜರಿಯಾಗಿ ನಡೆಸಲು ಬಿಸಿಸಿಐ ಪ್ಲ್ಯಾನ್ ಮಾಡಿದ್ದು, ಅಂತಿಮ ಪಂದ್ಯ ಪ್ರಾರಂಭವಾಗುವ ಮೊದಲು ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಹತ್ತು ನಿಮಿಷಗಳ ಕಾಲ ಜನರನ್ನು ಆಕರ್ಷಿಸಲಿದೆ ಎಂದು ಗುಜರಾತ್ನ ಡಿಫೆನ್ಸ್ ಪಿಆರ್ಒ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಏರ್ ಶೋ ಆಯೋಜಿಸಲು ಸ್ಥಳೀಯ ಆಡಳಿತದ ಅನುಮತಿ ಕೂಡ ಕೇಳಲಾಗಿದೆ. ಐಎಎಫ್ ಕಡೆಯಿಂದ ಏರ್ ಶೋ ಮಾತ್ರವಲ್ಲದೆ, ಈ ಸಮಾರಂಭದಲ್ಲಿ ಖ್ಯಾತನಾಮ ಬಾಲಿವುಡ್ ಸೆಲೆಬ್ರಿಟಿಗಳು ಕೂಡ ವಿಶ್ವಕಪ್ ಫೈನಲ್ ಪಂದ್ಯವನ್ನು ವೀಕ್ಷಣೆ ಮಾಡಲಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಕೂಡ ಪಂದ್ಯವನ್ನು ವೀಕ್ಷಿಸಲು ಸ್ಟೇಡಿಯಂಗೆ ಹಾಜರಾಗುವ ನಿರೀಕ್ಷೆಯಿದೆ ಎಂದು ಮಾಹಿತಿ ಲಭ್ಯವಾಗಿದೆ.