ಕರಾಚಿ, ನ 24 (DaijiworldNews/PC): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಫೈನಲ್ಗೆ ಕಾಲಿಟ್ಟಿದ್ದು ಎಲ್ಲರಲ್ಲೂ ಭಾರತ ಗೆದ್ದೇ ಗೆಲ್ಲುತ್ತದೆ ಎಂಬ ಭಾವನೆ ಎಲ್ಲಾ ಭಾರತದ ಜನರಲ್ಲಿತ್ತು. ಆದರೆ ಆಸ್ಟ್ರೇಲಿಯಾ ತಂಡವು 6 ವಿಕೆಟ್ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತವನ್ನು ಹಿಮ್ಮೆಟ್ಟಿತು. ಇದೇ ಸಮಯದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಭಾರತ ವಿರುದ್ದ ಮಾತನಾಡಿದ್ದು,ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಈ ಅಬ್ದುಲ್ ರಜಾಕ್ ಭಾರತ ವಿಶ್ವಕಪ್ ಸೋತಿದ್ದು ಒಳ್ಳೆಯದ್ದೇ ಆಯಿತು ಎಂದು ಭಾರತವನ್ನು ವ್ಯಂಗ್ಯವಾಡಿದ್ದಾರೆ. ಪದೇ ಪದೇ ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಸುದ್ದಿಯಾಗುತ್ತಿರುವ ರಜಾಕ್ ಭಾರತಕ್ಕೆ ಅಪಹಾಸ್ಯ ಮಾಡಿದಂತಾಗಿದೆ.
ಪಾಕಿಸ್ತಾನ ಟಿವಿ ಚಾನೆಲ್ವೊಂದರ ಹಸ್ನಾ ಮನಾ ಹೈ ಎನ್ನುವ ಶೋನಲ್ಲಿ ಭಾಗವಹಿಸಿ ಮಾತನಾಡಿರುವ ರಜಾಕ್, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಅತಿಯಾದ ಆತ್ಮವಿಶ್ವಾಸದಿಂದ ಬೀಗುತ್ತಿತ್ತು ಹಾಗೂ ಇಂತಹ ಪ್ರತಿಷ್ಠಿತ ಟೂರ್ನಿಯನ್ನು ಆತಿಥೇಯ ದೇಶವು ಗೆದ್ದಿದ್ದರೂ ಅದು ನಿಜಕ್ಕೂ ಕ್ರೀಡೆಯ ದುರಂತ ಎನಿಸಿಕೊಳ್ಳುತ್ತಿತ್ತು ಎಂದು ಹೇಳಿದ್ದಾರೆ.
ಭಾರತ ವಿಶ್ವಕಪ್ ಗೆದ್ದಿದ್ದರೆ, ನಮಗೆ ನಿಜಕ್ಕೂ ಬೇಸರವಾಗುತ್ತಿತ್ತು. ಯಾಕೆಂದರೆ ಅವರು ತವರಿನ ಮೈದಾನದ ಲಾಭವನ್ನು ಬಳಸಿಕೊಂಡಂತೆ ಆಗುತ್ತಿತ್ತು. ಒಂದು ಸೆಮಿಫೈನಲ್ ಪಂದ್ಯದಲ್ಲಿ ಅವರು 400 ರನ್ ಬಾರಿಸಿದರೆ, ಎದುರಾಳಿ ತಂಡ 350 ರನ್ ಗಳಿಸಿತು. ಅದೇ ರೀತಿ ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ 220-230 ರನ್ ಗಳಷ್ಟೇ ದಾಖಲಾದವು. ಇನ್ನು ಫೈನಲ್ ಪಂದ್ಯದಲ್ಲಿ 240 ರನ್ ದಾಖಲಾಯಿತು. ಅದರರ್ಥ ಎಲ್ಲೋ ಏನೋ ಯಡವಟ್ಟಾಗಿದೆ ಎಂದು. ಪಿಚ್ಗಳು ಹಾಗೂ ವಾತಾವರಣಗಳು ಯಾವಾಗಲೂ ನ್ಯಾಯಸಮ್ಮತವಾಗಿರಬೇಕು. ಪಿಚ್ಗಳು ಯಾವಾಗಲೂ ಎರಡು ತಂಡಗಳು ಸಮಬಲದ ಹೋರಾಟ ನೀಡುವಂತೆ ನಿರ್ಮಾಣ ಮಾಡಬೇಕು. ಒಂದು ವೇಳೆ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರೇ, ಆಗ ಭಾರತ ವಿಶ್ವಕಪ್ ಗೆಲ್ಲುತ್ತಿತ್ತು ಎಂದು ಹೇಳಿದ್ದಾರೆ.