ದುಬೈ,ನ 26(DaijiworldNews/RA):ಭಾರತ ಮತ್ತು ಪಾಕಿಸ್ತಾನ ದೇಶದ ನಡುವಿನ ಸಂಬಂಧ ಅಷ್ಟಕಷ್ಟೇ ಇದೆ.ಈ ನಡುವೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಹೊಸ ವರೆಸೆಯೊಂದು ತೆಗೆದಿದೆ.
ರಾಜಕೀಯ ಮತ್ತು ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಚಾಂಪಿಯನ್ಸ್ ಟ್ರೋಫಿ 2025ರಲ್ಲಿ ಭಾರತದ ಕ್ರಿಕೆಟ್ ತಂಡ ಪಾಕ್ ಗೆ ಬಂದು ಆಡಲು ನಿರಾಕರಿಸಿದರೆ ಪಿಸಿಬಿಗೆ ಪರಿಹಾರ ನೀಡಬೇಕು ಅನ್ನುವ ಒಪ್ಪಂದಗಳಿಗೆ ಸಹಿ ಹಾಕುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಒತ್ತಾಯ ಮಾಡಿದೆ ಎಂದು ತಿಳಿದು ಬಂದಿದೆ.
ಐಸಿಸಿ ಪಾಕಿಸ್ತಾನವನ್ನು ಪಂದ್ಯಾವಳಿಯ ಆತಿಥೇಯ ಎಂದು ಗುರುತಿಸಿದ್ದರೂ, ಜಾಗತಿಕ ಸಂಸ್ಥೆಯು ಅದರೊಂದಿಗೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಪಿಸಿಬಿಯ ಅತ್ಯಂತ ವಿಶ್ವಾಸಾರ್ಹ ಮೂಲವು ಮಾಧ್ಯಮಗಳಿಗೆ ಮಾಹಿತಿ ನೀಡಿದೆ.
2025ರ ಫೆಬ್ರವರಿ-ಮಾರ್ಚ್ ನಲ್ಲಿ ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆಯೋಜಿಸುವ ಕುರಿತು ಚರ್ಚಿಸಲು ಪಿಸಿಬಿ ಅಧ್ಯಕ್ಷ ಝಾಕಾ ಅಶ್ರಫ್ ಮತ್ತು ಸಿಒಒ ಸಲ್ಮಾನ್ ನಾಸೀರ್ ಅವರು ಅಹಮದಾಬಾದ್ನಲ್ಲಿ ಐಸಿಸಿ ಕಾರ್ಯಕಾರಿ ಮಂಡಳಿಯನ್ನು ಭೇಟಿ ಮಾಡಿದ್ದಾರೆ ಎನ್ನುವ ಮಾಹಿತಿಗಳನ್ನು ಮೂಲಗಳು ಬಹಿರಂಗಪಡಿಸಿವೆ.
ಬಿಸಿಸಿಐ ತನ್ನ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ನಿರಾಕರಿಸುವ ಸಂಭವನೀಯತೆಯ ಬಗ್ಗೆ ಪಾಕ್ ಅಧಿಕಾರಿಗಳು ಚರ್ಚಿಸಿದ್ದು, ಯಾವುದೇ ಪರಿಸ್ಥಿತಿಯಲ್ಲಿ ಬಿಸಿಸಿಐ ಪಂದ್ಯಾವಳಿಯಲ್ಲಿ ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ