ಮಂಗಳೂರು, ಎ17(Daijiworld News/SS): 2019ರ ವಿಶ್ವಕಪ್ ಟೂರ್ನಿಗೆ ಎಲ್ಲಾ ತಂಡಗಳು ತಯಾರಿ ಆರಂಭಿಸಿದೆ. ವಿಶ್ವಕಪ್ ಟೂರ್ನಿಗಾಗಿ ನ್ಯೂಜಿಲೆಂಡ್ ಈಗಾಗಲೇ 15 ಸದಸ್ಯರ ತಂಡ ಪ್ರಕಟಿಸಿದೆ. ಇದೀಗ ವಿಶ್ವಕಪ್ ಟೂರ್ನಿಗೆ ಭಾರತ ತಂಡದ 15 ಸದಸ್ಯರ ತಂಡ ಬಹುತೇಕ ಪೂರ್ಣಗೊಂಡಿದೆ.
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ(ಉಪ ನಾಯಕ), ಶಿಖರ್ ಧವನ್, ಕೆ.ಎಲ್ ರಾಹುಲ್, ಕೇದಾರ್ ಜಾಧವ್, ಎಂ.ಎಸ್.ಧೋನಿ, ವಿಜಯ್ ಶಂಕರ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಯಜುವೇಂದ್ರ ಚೆಹಾಲ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಸೇರಿದಂತೆ 15 ಸದಸ್ಯರ ಹೆಸರು ಪ್ರಕಟಿಸಿದೆ.
ಇಂಗ್ಲೆಂಡ್ನಲ್ಲಿ ಮೇ 30ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗಾಗಿ ಕರ್ನಾಟಕದ ಏಕೈಕ ಆಟಗಾರನಾಗಿ ಮಂಗಳೂರಿನ ಕೆ.ಎಲ್. ರಾಹುಲ್ ಸ್ಥಾನ ಪಡೆದಿರುವುದು ಕರಾವಳಿಗರಿಗೆ ಹೆಮ್ಮೆಯ ವಿಚಾರವಾಗಿದೆ. ಮಂಗಳೂರಿನಲ್ಲಿ ಶಿಕ್ಷಣ ಹಾಗೂ ಕ್ರಿಕೆಟ್ ತರಬೇತಿ ಪಡೆದಿರುವ ರಾಹುಲ್ ಇತ್ತೀಚಿನ ಟೀಮ್ ಇಂಡಿಯಾ ಸರಣಿಗಳಲ್ಲಿ ಉತ್ತಮ ಆಟ ಪ್ರದರ್ಶಿಸುವಲ್ಲಿ ವಿಫಲರಾಗಿದ್ದರೂ ಐಪಿಎಲ್ನಲ್ಲಿ ಪಂಜಾಬ್ ಪರ ಭರ್ಜರಿ ಪ್ರದರ್ಶನ ನೀಡಿರುವುದು ವಿಶ್ವಕಪ್ ಆಯ್ಕೆಗೆ ಕಾರಣವಾಗಿದೆ.
ಈ ಹಿಂದೆ ಶ್ರೀಲಂಕಾ ವಿರುದ್ಧ ಪಲ್ಲೆಕೆಲೆ ಮೈದಾನದಲ್ಲಿ ಕೆ.ಎಲ್. ರಾಹುಲ್ ಸತತ ಏಳು ಅರ್ಧಶತಕಗಳನ್ನು ಸಿಡಿಸುವ ಮೂಲಕ ಭಾರತದ ಮೊದಲ ಹಾಗೂ ವಿಶ್ವದ ಆರನೇ ಆಟಗಾರ ಎನ್ನುವ ಖ್ಯಾತಿಗೆ ಭಾಜನರಾಗಿದ್ದರು. ಕರ್ನಾಟಕದ ಪ್ರತಿಭಾನ್ವಿತ ಕ್ರಿಕೆಟಿಗ ಕೆ. ಎಲ್. ರಾಹುಲ್ ಅವರು ಈಗಾಗಲೇ ತಮ್ಮ ಸಾಮರ್ಥ್ಯ ಏನು ಎಂಬುದನ್ನು ಎಲ್ಲಾ ಕ್ರಿಕೆಟ್ ಪ್ರಕಾರಗಳಲ್ಲೂ ತೋರಿಸಿದ್ದಾರೆ.