ದೆಹಲಿ, ಏ 17 (Daijiworld News/SM): ಮುಂದಿನ ತಿಂಗಳು ನಡೆಯಲಿರುವ 2019ರ ವಿಶ್ವಕಪ್ಗೆ 15 ಸದಸ್ಯರ ತಂಡ ಈಗಾಗಲೇ ಪ್ರಕಟಗೊಂಡಿದೆ. ಯುವ ಕ್ರೀಡಪಟುಗಳೇ ಈ ತಂಡದಲ್ಲಿದ್ದಾರೆ. ಇದರಲ್ಲಿ 7 ಆಟಗಾರರು ಚೊಚ್ಚಲ ವಿಶ್ವಕಪ್ ಆಡುತ್ತಿದ್ದಾರೆ.
ಕಳೆದ ಎರಡು ವರ್ಷಗಳಿಂದ ಸೀಮಿತ ಓವರ್ಗಳಲ್ಲಿ ಅದ್ಭುತ ಪ್ರದರ್ಶನ ತೋರುತ್ತಿರುವ ಆಟಗಾರರಾದ ಬುಮ್ರಾ, ಕುಲ್ದೀಪ್ ಯಾದವ್, ಕೇದಾರ್ ಜಾಧವ್, ಯಜುವೇಂದ್ರ ಚಹಾಲ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್ ಹಾಗೂ ಕನ್ನಡಿಗ ಕೆಎಲ್ ರಾಹುಲ್ಗೆ ಈ ಬಾರಿಯ ವಿಶ್ವಕಪ್ ಚೊಚ್ಚಲವೆನಿಸಲಿದೆ.
ಜಸ್ಪ್ರೀತ್ ಬುಮ್ರಾ ಏಕದಿನ ಕ್ರಿಕೆಟ್ ಬೌಲಿಂಗ್ ಶ್ರೇಯಾಂಕದಲ್ಲಿ ಜಸ್ಪ್ರೀತ್ ಬುಮ್ರಾ ಮೊದಲ ಸ್ಥಾನದಲ್ಲಿದ್ದು, ಕಳೆದೆರಡು ವರ್ಷಗಳಿಂದ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಟೀಂ ಇಂಡಿಯಾಕ್ಕೆ ಆಧಾರವೆನಿಸಿದ್ದಾರೆ. 49 ಏಕದಿನ ಪಂದ್ಯಗಳಲ್ಲಿ ಆಡಿರುವ ಬುಮ್ರಾ 85 ವಿಕೆಟ್ ಪಡೆದಿದ್ದಾರೆ.
ಇನ್ನು ಕನ್ನಡಿಗ ಕೆಎಲ್ ರಾಹುಲ್ ಕೇವಲ 14 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಕನ್ನಡಿಗ ರಾಹುಲ್ ಗೂ ಇದು ಚೊಚ್ಚಲ ವಿಶ್ವಪಕ್. ರಾಹುಲ್ 13 ಇನ್ನಿಂಗ್ಸ್ನಲ್ಲಿ ಒಂದು ಶತಕ ಹಾಗೂ 2 ಅರ್ಧಶತಕ ಸಿಡಿಸಿದ್ದಾರೆ.
ಇನ್ನು ತಮಿಳುನಾಡು ಮೂಲದ ವಿಜಯ್ ಶಂಕರ್ ಇದೇ ವರ್ಷ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಅವಕಾಶ ಪಡೆದು ಅಂತಾರಾಷ್ಟ್ರೀಯ ಏಕದಿನ ಪಂದ್ಯಕ್ಕೆ ಎಂಟ್ರಿಕೊಟ್ಟಿದ್ದರು. ಅವರು ಕೇವಲ 9 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿಸಿಧಿಸಿದ್ದಾರೆ. ಇವರು ಆಲ್ರೌಂಡರ್ ಕೋಟಾದಲ್ಲಿ ವಿಶ್ವಕಪ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ.
ಕುಲ್ದೀಪ್ ಯಾದವ್ ಭಾರತದ ಮಂಚೂಣಿ ಸ್ಪಿನ್ ಬೌಲರ್ ಆಗಿದ್ದಾರೆ. ಯಾದವ್ 44 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದು, 87 ವಿಕೆಟ್ ಪಡೆದಿದ್ದಾರೆ. ಯಾದವ್ 2017 ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು.
ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಕೋಟಾದಲ್ಲಿ ಖಾಯಂ ಎನಿಸಿಕೊಂಡಿದ್ದಾರೆ. ಭಾರತ ತಂಡದ ಸದಸ್ಯನಾಗಿರುವ ಹಾರ್ದಿಕ್ ಪಾಂಡ್ಯ 2016 ರಲ್ಲಿ ಏಕದಿನ ಕ್ರಿಕೆಟ್ಗೆ ಎಂಟ್ರಿಕೊಟ್ಟಿದ್ದರು. ಪಾಂಡ್ಯ 45 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು, 4 ಅರ್ಧಶತಕ ಸಹಿತ 731 ರನ್ ಸಿಡಿಸಿದ್ದಾರೆ. ಬೌಲಿಂಗ್ನಲ್ಲಿ 44 ವಿಕೆಟ್ ಗಳನ್ನು ಪಡೆದುಕೊಂಡಿದ್ದಾರೆ.
ಇನ್ನು ಯಜುವೇಂದ್ರ ಚಹಾಲ್ 2016 ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಚಹಾಲ್ ತಮ್ಮ ಸ್ಪಿನ್ ಕೈಚಳಕದಿಂದ 41 ಪಂದ್ಯಗಳಿಂದ 72 ವಿಕೆಟ್ ಪಡೆದಿದ್ದಾರೆ. ಇವರಿಗೂ ಕೂಡ ಇದುವೇ ಮೊದಲ ವಿಶ್ವಕಪ್ ಪಂದ್ಯವಾಗಲಿದೆ.
ಕೇದಾರ್ ಜಾಧವ್ 2014ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. ಇವರು 59 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 102 ಸ್ಟ್ರೈಕ್ರೇಟ್ನಲ್ಲಿ 1174 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಹಾಗೂ 5 ಅರ್ಧಶತಕ ಕೂಡ ಸೇರಿವೆ.
ಈ ಏಳು ಮಂದಿಯನ್ನು ಹೊರತುಪಡಿಸಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ 4ನೇ ವಿಶ್ವಕಪ್ ಆಡುತ್ತಿದ್ದರೆ, ರೋಹಿತ್, ಕೊಹ್ಲಿ ಪಾಲಿಗಿದು 3ನೇ ವಿಶ್ವಕಪ್ ಆಗಿದೆ. ಕಾರ್ತಿಕ್ 2007ರ ವಿಶ್ವಕಪ್ನಲ್ಲಿ ಸ್ಥಾನ ಪಡೆದಿದ್ದರು. ಇದೀಗ 10 ವರ್ಷಗಳ ನಂತರ ಮತ್ತೆ ವಿಶ್ವಕಪ್ ಟೀಮ್ನಲ್ಲಿ ಕಾಣಿಸಿಕೊಂಡಿದ್ದಾರೆ. ಭುವನೇಶ್ವರ್, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಹಾಗೂ ಶಿಖರ್ ಧವನ್ 2015ರ ವಿಶ್ವಕಪ್ನಲ್ಲಿ ಆಡಿದ್ದರು.