ಬೆಂಗಳೂರು, ಡಿ 4 (DaijiworldNews/MR): ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯ ಕೊನೆ ಪಂದ್ಯದಲ್ಲಿ ಭಾರತ ತಂಡ 6 ರನ್ಗಳ ಜಯ ಸಾಧಿಸಿದೆ. ಅದರೊಂದಿಗೆ 4-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತ್ತು. 161 ರನ್ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಲು ಶಕ್ತವಾಯಿತು.
ಕೊನೆ ಓವರ್ನಲ್ಲಿ ಆಸೀಸ್ಗೆ ಗೆಲ್ಲಲು 10 ರನ್ ಬೇಕಿತ್ತು. ಅರ್ಶದೀಪ್ ಸಿಂಗ್ ಉತ್ತಮ ಬೌಲಿಂಗ್ ಮಾಡಿ ಕೇವಲ 3 ರನ್ ಕೊಟ್ಟರು. ಜೊತೆಗೆ ವೇಡ್ ಅವರ ವಿಕೆಟ್ ಪತನಗೊಳಿಸಿದರು. ಆ ಮೂಲಕ ಭಾರತದ ಗೆಲುವಿನಲ್ಲಿ ಅರ್ಶದೀಪ್ ಸಿಂಗ್ ಪ್ರಮುಖ ಪಾತ್ರ ವಹಿಸಿದರು.
ಆಸ್ಟ್ರೇಲಿಯಾ ಪರ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ 28, ಬೆನ್ ಮೆಕ್ಡೆರ್ಮೊಟ್ 54 ರನ್ ಗಳಿಸಿದರು. ಟಿಮ್ ಡೇವಿಡ್ 17, ಮ್ಯಾಥ್ಯೂ ಶಾರ್ಟ್ 16, ಮ್ಯಾಥ್ಯೂ ವೇಡ್ 22 ರನ್ ಗಳಿಸಿದರು.
ಇದಕ್ಕೂ ಮೊದಲು ಭಾರತದ ಪರ ಶ್ರೇಯರ್ ಐಯ್ಯರ್ 37 ಎಸೆತಗಳಿಗೆ 53 ರನ್ ಗಳಿಸಿ ಗಮನ ಸೆಳೆದರು. ಜಿತೇಶ್ ಶರ್ಮಾ 24, ಅಕ್ಷರ್ ಪಟೇಲ್ 31 ರನ್ ಗಳಿಸಿದರು. ಆದರೆ ನಾಯಕ ಸೂರ್ಯಕುಮಾರ್ ಯಾದವ್ 5 ರನ್ ಹಾಗೂ ರಿಂಕು ಸಿಂಗ್ 6 ರನ್ ಗಳಿಸುವ ಮೂಲಕ ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವಲ್ಲಿ ವಿಫಲರಾದರು.