ಸೂರತ್, ಡಿ 08 (DaijiworldNews/AA): ಇಂಡಿಯಾ ಕ್ಯಾಪಿಟಲ್ಸ್ ಹಾಗೂ ಗುಜರಾತ್ ಜೈಂಟ್ಸ್ ನಡುವೆ ಡಿ. 6 ರಂದು ನಡೆದ ಎಲಿಮಿನೇಟರ್ ಪಂದ್ಯದ ವೇಳೆ ಗೌತಮ್ ಗಂಭೀರ್ ನನ್ನನ್ನು ಫಿಕ್ಸರ್ ಎಂದು ಕರೆದಿದ್ದರು ಎಂದು ಹೇಳಿ ಶ್ರೀಶಾಂತ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದರು. ಇದೀಗ ಗಂಭೀರ್ ವಿರುದ್ಧ ಆರೋಪಿಸಿದ ಶ್ರೀಶಾಂತ್ ಗೆ ಲೆಜೆಂಡ್ಸ್ ಲೀಗ್ ಕ್ರಿಕೇಟ್ (ಎಲ್ ಎಲ್ ಸಿ) ಆಯೋಜಕರು ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.
ಎಲ್ ಎಲ್ ಸಿ ಆಯೋಜಕರು ಜಾರಿ ಮಾಡಿರುವ್ ನೋಟಿಸ್ ನಲ್ಲಿ ಪ್ರಸ್ತುತ ವೈರಲ್ ಆಗಿರುವ ಗಂಭೀರ್ ವಿರುದ್ಧ ಆರೋಪ ಹೊರಿಸಿ ಮಾಡಿರುವ ಎಲ್ಲಾ ವೀಡಿಯೊಗಳನ್ನು ಕೂಡಲೇ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಬೇಕು. ವಿಡಿಯೋಗಳನ್ನು ಡಿಲೀಟ್ ಮಾಡಿದ ನಂತರವಷ್ಟೇ ಪ್ರಕರಣದ ಕುರಿತು ಮಾತುಕತೆ ನಡೆಸುವುದಾಗಿ ಉಲ್ಲೇಖ ಮಾಡಲಾಗಿದೆ.
ಇನ್ನು ಪಂದ್ಯದ ವೇಳೆ ಇವರಿಬ್ಬರ ನಡುವೆ ನಡೆದ ಪರಸ್ಪರ ಮಾತಿನ ಚಕಮಕಿ ಬಗ್ಗೆ ಅಂಪೈರ್ಗಳು ಆಯೋಜಕರಿಗೆ ನೀಡಿರುವ ವರದಿಯಲ್ಲಿ ಗಂಭೀರ್, ಫಿಕ್ಸರ್ ಪದವನ್ನು ಬಳಸಿಲ್ಲ ಎಂದು ಉಲ್ಲೇಖಿಸಲಾಗಿದೆ.
ವಿಡಿಯೋದಲ್ಲೇನಿದೆ?
ಶ್ರೀಶಾಂತ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ ಗಂಭೀರ್ ನನ್ನನ್ನು ಫಿಕ್ಸರ್ ಎಂದು ಕರೆದು ಅವಮಾನಿಸಿದರು. ಅಂಪೈರ್ ಉಪಸ್ಥಿತಿಯಲ್ಲೂ ಗಂಭೀರ್ ಇದೇ ರೀತಿಯಾಗಿ ನನ್ನನ್ನು ನಿಂದಿಸಿದರು ಎಂದು ಆರೋಪಿಸಿದ್ದರು.