ಪರ್ತ್, ಡಿ 14 (DaijiworldNews/MR): ಪರ್ತ್ನಲ್ಲಿ ನಡೆಯುತ್ತಿರುವ ಪಾಕಿಸ್ತಾನ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸ್ಟಾರ್ ಕ್ರಿಕೆಟರ್ ಡೇವಿಡ್ ವಾರ್ನರ್ ಭರ್ಜರಿ ಶತಕ ಬಾರಿಸಿದ್ದಾರೆ. ಈ ಪಂದ್ಯದಲ್ಲಿ ವಾರ್ನರ್ 125 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಟೆಸ್ಟ್ ಸರಣಿಯ ಮೊದಲ ದಿನವಾದ ಇಂದು ವಾರ್ನರ್ ಅದ್ಭುತ ಶತಕ ಬಾರಿಸಿ ತಮ್ಮನ್ನು ಟೀಕೆ ಮಾಡುತ್ತಿದ್ದವರಿಗೆ ಸನ್ನೆ ಮೂಲಕವೇ ಉತ್ತರಿಸಿದ್ದಾರೆ. ಶತಕ ಸಿಡಿಸಿ ಮೈದಾನದಲ್ಲಿ ಸಂಭ್ರಮಿಸಿದ ಪರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಟೆಸ್ಟ್ ಪಂದ್ಯಗಳಲ್ಲಿ ಕಳಪೆ ಆಟ ನೀಡುತ್ತಿದ್ದ ಆಟಗಾರನಿಗೆ ವಿದಾಯದ ಪಂದ್ಯವನ್ನು ಆಡಲು ಅವಕಾಶ ಮಾಡಿಕೊಡುವ ಅವಶ್ಯಕತೆ ಏನಿತ್ತು. ಆಸ್ಟ್ರೇಲಿಯನ್ ಕ್ರಿಕೆಟ್ ಇತಿಹಾಸದಲ್ಲಿ ಅತಿದೊಡ್ಡ ಹಗರಣಗಳಲ್ಲಿ ಭಾಗಿಯಾಗಿದ್ದ ಆಟಗಾರನಿಗೆ ವಿದಾಯದ ಪಂದ್ಯವನ್ನಾಡುವ ಅವಕಾಶ ನೀಡುವ ಅಗತ್ಯವೆನಿತ್ತು ಎಂದು ಮಾಜಿ ವೇಗಿ ಮಿಚೆಲ್ ಜಾನ್ಸನ್ ಪ್ರಶ್ನಿಸಿದ್ದರು. ಜಾನ್ಸನ್ ಅವರ ಈ ಹೇಳಿಕೆಗೆ ಭಾರಿ ವಿರೋಧ ಕೂಡ ವ್ಯಕ್ತವಾಗಿತ್ತು.
ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯು ವಾರ್ನರ್ ಅವರ ಟೆಸ್ಟ್ ವೃತ್ತಿಜೀವನದ ಕೊನೆಯ ಸರಣಿ ಎಂಬ ಮಾತು ಕೂಡು ಕೇಳಿಬಂದಿತ್ತು. ಆದರೆ ವಾರ್ನರ್ ಈ ಬಗ್ಗೆ ಬಹಿರಂಗವಾಗಿ ಮಾತನಾಡಿರಲಿಲ್ಲ, ಇದೀಗ ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದಲೇ ಜಾನ್ಸನ್ ಅವರಿಗೆ ಉತ್ತರ ಕೊಟ್ಟಿದ್ದಾರೆ.
ಈ ಸೆಂಚುರಿಯೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಕ್ರಿಯರಾಗಿರುವ ಬ್ಯಾಟರ್ಗಳ ಪಟ್ಟಿಯಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವದ 2ನೇ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ವಾರ್ನರ್ ಪಾತ್ರರಾಗಿದ್ದಾರೆ. 110ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ವಾರ್ನರ್ 125 ಬಾಲ್ ನಲ್ಲಿ ಶತಕ ಬಾರಿಸಿದ್ದಾರೆ. 14 ಬೌಂಡರಿ, ಒಂದು ಸಿಕ್ಸರ್ ಬಾರಿಸಿ ಶತಕ ಸಿಡಿಸಿದ್ದಾರೆ.
ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವಾರ್ನರ್ ಕೇವಲ 125 ಎಸೆತಗಳಲ್ಲಿ ಶತಕ ಪೂರೈಸಿದರು. ಸೆಂಚುರಿ ಬಳಿಕ ಕೂಡ ಸ್ಪೋಟಕ ಇನಿಂಗ್ಸ್ ಮುಂದುವರೆಸಿದ ವಾರ್ನರ್ 211 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 16 ಫೋರ್ ಗಳೊಂದಿಗೆ 164 ರನ್ ಗಳಿಸಿದರು. ಈ ಮೂಲಕ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 49ನೇ ಶತಕವನ್ನು ಪೂರೈಸಿದ್ದಾರೆ. ಜೊತೆಗೆ ಟೆಸ್ಟ್ ಕ್ರಿಕೆಟ್ನಲ್ಲಿ 26ನೇ ಶತಕ ಇದಾಗಿದೆ.
ಇನ್ನು ಸ್ಟೀವ್ ಸ್ಮಿತ್ 30 ರನ್ಗಳು, ಟ್ರಾವಿಸ್ ಹೆಡ್ 40 ರನ್. ಅದರಂತೆ ಮೊದಲ ದಿನದಾಟದ ಮುಕ್ತಾಯದ ವೇಳೆಗೆ ಆಸ್ಟ್ರೇಲಿಯಾ ತಂಡವು 5 ವಿಕೆಟ್ ಕಳೆದುಕೊಂಡು 346 ರನ್ ಗಳಿಸಿದೆ. ಕ್ರೀಸ್ನಲ್ಲಿ ಮಿಚೆಲ್ ಮಾರ್ಷ್ 15 ಹಾಗೂ ಅಲೆಕ್ಸ್ ಕ್ಯಾರಿ 14 ರನ್ ಗಳನ್ನು ಪಡೆದುಕೊಂಡಿದ್ದಾರೆ.