ಮುಂಬೈ, ಡಿ 20 (DaijiworldNews/AA): ರೋಹಿತ್ ಶರ್ಮಾ ಅವರನ್ನು ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವದಿಂದ ಕೆಳಗಿಸಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವ ವಹಿಸಲಾಗಿದೆ. ಇದರ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಅವರನ್ನೂ ಮುಂಬೈ ತಂಡದ ಮೆಂಟರ್ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಸಿದ ಬೆನ್ನಲ್ಲೇ ಸಚಿನ್ ತೆಂಡೂಲ್ಕರ್ ಅವರನ್ನು ಮುಂಬೈ ತಂಡದ ಮೆಂಟರ್ ಸ್ಥಾನದಿಂದ ಕೆಳಗಿಳಿಸಲಾಗಿದೆ. ಜೊತೆಗೆ ರೋಹಿತ್ ಬದಲು ಹಾರ್ದಿಕ್ ಗೆ ನಾಯಕತ್ವ ವಹಿಸುವುದು ಅಥವಾ ನಾಯಕತ್ವ ನೀಡುವುದಕ್ಕೋಸ್ಕರವೇ ಅವರನ್ನು ಖರೀದಿ ಮಾಡುವುದು ಸಚಿನ್ ಗೆ ಇಷ್ಟ ಇರಲಿಲ್ಲ ಎಂದು ಇದರಿಂದ ತಿಳಿಯುತ್ತದೆ ಎಂದು ಕೆಲವರು ಹೇಳಿದ್ದಾರೆ.
ಆದರೆ ಇದೊಂದು ಸುಳ್ಳು ಸುದ್ದಿಯಾಗಿದ್ದು, ಸಚಿನ್ ಮುಂಬರುವ ಆವೃತ್ತಿಗಳಿಗೂ ಮುಂಬೈ ಇಂಡಿಯನ್ಸ್ ತಂಡದಲ್ಲೇ ಇರಲಿದ್ದಾರೆ ಎಂದು ಈ ಬಗ್ಗೆ ಮಾಡಿರುವ ಫ್ಯಾಕ್ಟ್ ಚೆಕ್ ನಿಂದ ತಿಳಿದುಬಂದಿದೆ.