ನವದೆಹಲಿ,ಡಿ.21( DaijiworlsNews/RA):ಒಲಿಂಪಿಕ್ ಪದಕ ವಿಜೇತೆ ಮತ್ತು ಕುಸ್ತಿಪಟು ಸಾಕ್ಷಿ ಮಲಿಕ್ ಅವರು ಕುಸ್ತಿಯನ್ನು ತ್ಯಜಿಸುವುದಾಗಿ ಘೋಷಿಸಿದ್ದಾರೆ.
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್ಐ) ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಆಪ್ತ ಸಂಜಯ್ ಸಿಂಗ್ ಕುಸ್ತಿ ಫೆಡರೇಶನ್ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಫಲಿತಾಂಶ ಪ್ರಕಟವಾದ ಕೆಲವೇ ಗಂಟೆಗಳಲ್ಲಿ ಸಾಕ್ಷಿ ಮಲಿಕ್ ಈ ಹೇಳಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಪತ್ರಕರ್ತರ ಮುಂದೆಯೇ ತಮ್ಮ ಬೂಟು ಕಳಚಿಟ್ಟು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಇಂದು ಹೊರಬಿದ್ದ ಫಲಿತಾಂಶದಲ್ಲಿ ಸಂಜಯ್ ಸಿಂಗ್ 47 ಮತಗಳಲ್ಲಿ 40 ಮತಗಳನ್ನು ಗಳಿಸಿದ್ದರೆ, ಕಾಮನ್ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಅನಿತಾ ಶೆಯೊರನ್ ಅವರು ಕೇವಲ ಏಳು ಮತಗಳನ್ನು ಪಡೆದಿದ್ದರು.
ಈ ಫಲಿತಾಂಶದ ಬಗ್ಗೆ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರಿಗೆ ನಿರಾಸೆ ವ್ಯಕ್ತಪಡಿಸಿದ್ದು, ಪತ್ರಿಗಾಗೋಷ್ಟಿಯಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ವಿನೇಶ್ ಫೋಗಟ್ “ಸಂಜಯ್ ಸಿಂಗ್ ಫೆಡರೇಶನ್ನ ಮುಖ್ಯಸ್ಥರಾಗಿ ಆಯ್ಕೆಯಾದ ನಂತರ, ಮಹಿಳಾ ಕುಸ್ತಿಪಟುಗಳು ಕಿರುಕುಳವನ್ನು ಎದುರಿಸುತ್ತಲೇ ಇರುತ್ತಾರೆ. ಇಲ್ಲಿ ನಮಗೆ ನ್ಯಾಯ ಹೇಗೆ ಸಿಗುತ್ತದೆ? ಮತ್ತು ಅದನ್ನು ಹೇಗೆ ಪಡೆದುಕೊಳ್ಳುವುದು ಎಂದು ಗೊತ್ತಾಗುತ್ತಿಲ್ಲ. ಈ ಘಟನೆಯಿಂದ ನಮ್ಮ ಕುಸ್ತಿ ವೃತ್ತಿಜೀವನದ ಭವಿಷ್ಯ ಕತ್ತಲೆಯಲ್ಲಿದೆ. ಎಲ್ಲಿಗೆ ಹೋಗಬೇಕೆಂದು ನಮಗೆ ತಿಳಿದಿಲ್ಲ” ಎಂದು ಹೇಳಿದ್ದಾರೆ.
ಕುಸ್ತಿ ಸಂಸ್ಥೆಯು ಮಹಿಳಾ ಮುಖ್ಯಸ್ಥರನ್ನು ಪಡೆಯಬೇಕೆಂಬ ಆಸೆ ಇತ್ತು, ಆದರೆ ಅದು ನಡೆಯಲಿಲ್ಲ. ಇದಕ್ಕಾಗಿ ನಾವು ಹೋರಾಟ ಮಾಡಿದ್ದೇವು ಆದರೆ ಇಂದು ಬ್ರಿಜ್ ಭೂಷಣ್ ಶರಣ್ ಸಿಂಗ್ ಆಪ್ತರೇ ಅಧ್ಯಕ್ಷರಾಗಿದ್ದಾರೆ.
ನಾನು ಕುಸ್ತಿಯನ್ನು ತ್ಯಜಿಸುತ್ತೇನೆ ಎಂದು ಹೇಳಿ ಸಾಕ್ಷಿ ಮಲಿಕ್ ತನ್ನ ಬೂಟುಗಳನ್ನು ಮೇಜಿನ ಮೇಲೆ ಇಟ್ಟು ತಮ್ಮ ಬೇಸರ ಹೊರ ಹಾಕಿದರು.