ಬೆಂಗಳೂರು, ಡಿ 30 (DaijiworldNews/MR): ಭಾರತ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತೆ ಕ್ಯಾಪ್ಟನ್ ಆಗಲಿ ಎಂಬ ಚರ್ಚೆ ಹುಟ್ಟಿಕೊಂಡಿದೆ. ಇದಕ್ಕೆ ಕಾರಣ ಇತ್ತೀಚೆಗೆ ಸೆಂಚೂರಿಯನ್ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ಸೌತ್ ಆಫ್ರಿಕಾ ವಿರುದ್ಧ ನಡೆದ ಮೊದಲನೇ ಟೆಸ್ಟ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಸೋತಿದ್ದು ಎನ್ನಲಾಗಿದೆ.
ಕ್ಯಾಪ್ಟನ್ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಸೌತ್ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡಿದೆ. 32 ರನ್ಗಳಿಂದ ಹೀನಾಯ ಸೋಲು ಕಂಡ ಬೆನ್ನಲ್ಲೇ ಟೀಂ ಇಂಡಿಯಾ ಟೆಸ್ಟ್ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿ ಎಂಬ ಮಾತುಗಳು ಕೇಳಿ ಬಂದಿವೆ. ಅದರಲ್ಲೂ ಮತ್ತೆ ಕೊಹ್ಲಿಯೇ ಟೆಸ್ಟ್ ಟೀಮ್ ಕ್ಯಾಪ್ಟನ್ ಆಗಲಿ ಅನ್ನೋ ಅಭಿಪ್ರಾಯ ಅಭಿಮಾನಿಗಳಿಂದ ಕೇಳಿ ಬರುತ್ತಿದೆ.
ಇನ್ನು, ಟೀಂ ಇಂಡಿಯಾ ಹೀನಾಯ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮಾತಾಡಿದ್ದಾರೆ. ನಿಮಗೆ ಇಷ್ಟವಿರಲಿ ಇಲ್ಲದಿರಲಿ. ಟೆಸ್ಟ್ ಕ್ರಿಕೆಟ್ ಆಡಲೇಬೇಕು. ನೀವು ಟೆಸ್ಟ್ ಕ್ರಿಕೆಟ್ನಲ್ಲಿ ವಿಭಿನ್ನ ಆಟ ಆಡಬೇಕು. ಇದು ಕೆಲವು ಗಂಟೆಗಳು, ಒಂದು ದಿನದ ಆಟವಲ್ಲ. ದಿನಗಟ್ಟಲೇ ನಡೆಯೋ ಆಟ ಟೆಸ್ಟ್ ಕ್ರಿಕೆಟ್ ಎಂದರು.
ಟೆಸ್ಟ್ ಕ್ರಿಕೆಟ್ ನಿಜವಾದ ಪರೀಕ್ಷೆ ಒಡ್ಡಲಿದೆ. ನಾವು ಮೊದಲ ಟೆಸ್ಟ್ನಲ್ಲಿ ಸೋತಿದ್ದೇವೆ. ಸೋಲು, ಗೆಲುವು ಇದ್ದಿದ್ದೇ. ಮುಂದಿನ ಟೆಸ್ಟ್ ಪಂದ್ಯ ಗೆದ್ದೇ ಗೆಲ್ಲುತ್ತೇವೆ. ಇಡೀ ತಂಡ ಕಠಿಣ ಶ್ರಮ ಹಾಕಿದರೆ ಗೆಲುವು ನಮ್ಮದೇ ಎಂದು ಕೋಹ್ಲಿ ಹೇಳಿದ್ದಾರೆ.