ಮುಂಬೈ, ಜ 05 (DaijiworldNews/AA): ಭಾರತದ ಮಾಜಿ ಕ್ರಿಕೆಟಿಗ, ಕ್ಯಾಪ್ಟನ್ ಕೂಲ್ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮಾಜಿ ಉದ್ಯಮ ಪಾಲುದಾರರಿಂದಲೇ 15 ಕೋಟಿ ರೂ. ವಂಚನೆ ಆಗಿದೆ. ವಂಚಿಸಿದವರ ವಿರುದ್ಧ ಧೋನಿ ರಾಂಚಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವುದಾಗಿ ವರದಿಯಾಗಿದೆ.
ಮಾಜಿ ಉದ್ಯಮ ಪಾಲುದಾರರಾದ ಅರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್ ಮೆಂಟ್ ಲಿಮಿಟೆಡ್ ನ ಇಬ್ಬರು ಅಧಿಕಾರಿಗಳಾದ ಮಿಹಿರ್ ದಿವಾಕರ್ ಮತ್ತು ಸೌಮ್ಯ ವಿಶ್ವಶ್ ವಿರುದ್ಧ ಧೋನಿ ಅವರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಇವರಿಬ್ಬರು 15 ಕೋಟಿ ರೂ. ವಂಚಿಸಿದ್ದಾರೆ ಎಂದು ಆರೋಪಿಸಿ ಧೋನಿ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಮೂಲಗಳ ಪ್ರಕಾರ ವಿಶ್ವ ಮಟ್ಟದಲ್ಲಿ ಕ್ರಿಕೆಟ್ ಅಕಾಡೆಮಿ ಸ್ಥಾಪಿಸುವ ಸಲುವಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಒಪ್ಪಂದಕ್ಕೆ ಸಂಬಂಧಿಸಿ ಇಬ್ಬರು ಅಧಿಕಾರಿಗಳು ಧೋನಿ ಅವರಿಗೆ ಕೋಟಿಗಟ್ಟಲೆ ವಂಚಿಸಿದ್ದಾರೆ. ಮಿಹಿರ್ ದಿವಾಕರ್ ಒಪ್ಪಂದದಲ್ಲಿದ್ದ ಷರತ್ತುಗಳನ್ನು ಪಾಲಿಸಿಲ್ಲ ಎಂದು ದೂರಿನಲ್ಲಿ ಧೋನಿ ಉಲ್ಲೇಖಿಸಿದ್ದಾರೆ.
ಜೊತೆಗೆ ದಿವಾಕರ್ ಅರ್ಕಾ ಸ್ಪೋರ್ಟ್ಸ್ ಫ್ರಾಂಚೈಸಿ ಶುಲ್ಕ ಹಾಗೂ ಷೇರು ಲಾಭವನ್ನು ಧೋನಿ ಅವರಿಗೆ ಪಾವತಿ ಮಾಡಿಲ್ಲ. ಆದ್ದರಿಂದ ಧೋನಿ 2021ರ ಆಗಸ್ಟ್ 15 ರಂದು ಅರ್ಕಾ ಸ್ಪೋರ್ಟ್ಸ್ ಗೆ ನೋಟಿಸ್ ಕಳುಹಿಸಿದ್ದರು. ನಂತರ ಅರ್ಕಾ ಸ್ಪೋಟ್ಸ್ ಗೆ ನೀಡಿದ್ದ ಹಕ್ಕುಗಳನ್ನು ರದ್ದು ಮಾಡಲಾಯಿತು. ಆ ಬಳಿಕ ಧೋನಿ ಅವರು ತಮ್ಮ ಮಾಜಿ ಉದ್ಯಮ ಪಾಲುದಾರರಿಗೆ ಹಲವಾರು ಬಾರಿ ನೋಟಿಸ್ ನೀಡಿದರೂ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.