ಚೀನಾ, ಏ 21(Daijiworld News/sM): ಚೀನಾದ ನಿಂಗ್ಬೋದಲ್ಲಿ ಏಪ್ರಿಲ್ 21ರ ರವಿವಾರ ನಡೆದ ಏಷ್ಯನ್ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ನ 67 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಭಾರತ ಪದಕ ಗೆದ್ದುಕೊಂಡಿದೆ.
ಪ್ರತಿಭಾನ್ವಿತ ಲಿಫ್ಟರ್ ಜೆರೆಮಿ ಲಲ್ರಿನ್ನಂಗ ಅವರು ಯೂತ್ ವರ್ಲ್ಡ್ ರೆಕಾರ್ಡ್, ನ್ಯಾಷನಲ್ ಸೀನಿಯರ್ ರೆಕಾರ್ಡ್ ನೊಂದಿಗೆ ಗ್ರೂಪ್ 'ಬಿ'ಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಗ್ರೂಪ್ 'ಬಿ'ಯ ಪುರುಷರ 67 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿರುವ 16ರ ಹರೆಯದ ಜೆರೆಮಿ, ಸ್ನ್ಯಾಚ್, ಕ್ಲೀನ್ ಆ್ಯಂಡ್ ಜರ್ಕ್ ನಲ್ಲಿ 297 ಕೆಜಿ ಭಾರ ಎತ್ತುವ ಮೂಲಕ ಯೂತ್ ವಿಶ್ವ ದಾಖಲೆ ಮತ್ತು ಏಷ್ಯನ್ ದಾಖಲೆ ನಿರ್ಮಿಸಿದ್ದಾರೆ. ಜೆರೆಮಿ ಈ ಸಾಧನೆ ರಾಷ್ಟ್ರೀಯ ಮಟ್ಟದಲ್ಲಿ ಹಿರಿಯರ ವಿಭಾಗದ ದಾಖಲೆ ಎಂಬುವುದು ಗಮನಾರ್ಹ ಎನಿಸಿಕೊಂಡಿದೆ. ಜೆರೆಮಿಯವರ ಸಾಧನೆ ಗ್ರೂಪ್ ಬಿ ಭಾಗದಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸುವಂತೆ ಮಾಡಿದೆ.
ಗ್ರೂಪ್ 'ಬಿ'ಯಲ್ಲಿ ಮೊದಲ ಸ್ಥಾನದಲ್ಲಿರುವ ಪಾಕಿಸ್ತಾನದ ಲಿಫ್ಟರ್ ತಲ್ಹಾ ತಾಲಿಬ್ ಒಟ್ಟು 304 ಕೆಜಿ ಸಾಧನೆ ತೋರಿದ್ದರು.