ಕಠ್ಮಂಡು, ಜ 11(DaijiworldNews/AA): ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರನಾಗಿದ್ದ ಕ್ರಿಕೆಟಿಗ ಸಂದೀಪ್ ಲಮಿಚಾನೆ(24) ವಿರುದ್ಧ ಅತ್ಯಾಚಾರ ಆರೋಪ ಸಾಬೀತಾಗಿದ್ದು, ಈ ಹಿನ್ನೆಲೆ ಸಂದೀಪ್ ಲಮಿಚಾನೆಗೆ 8 ವರ್ಷ ಜೈಲು ಶಿಕ್ಷೆ ಹಾಗೂ 3 ಲಕ್ಷ ರೂ. ದಂಡ ವಿಧಿಸಿ ಕಠ್ಮಂಡು ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
2023ರ ಅಕ್ಟೋಬರ್ ತಿಂಗಳಲ್ಲಿ ಕ್ರಿಕೆಟಿಗ ಸಂದೀಪ್ ಲಮಿಚಾನೆ ಅವರನ್ನು 17 ವರ್ಷದ ಯುವತಿಯ ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇದೀಗ ಈ ಪ್ರಕರಣ ಸಾಬೀತಾಗಿದ್ದು, ಸಂದೀಪ್ ಮಿನಾಚೆಗೆ ನ್ಯಾಯಾಲಯ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ. ನ್ಯಾಯಾಲಯ ಸಂದೀಪ್ ಮಿನಾಚೆಗೆ ದಂಡ ವಿಧಿಸಿದ 3 ಲಕ್ಷ ರೂ. ಹಣದಲ್ಲಿ 2 ಲಕ್ಷ ರೂ.ಗಳನ್ನು ಸಂತ್ರಸ್ಥೆಗೆ ಪರಿಹಾರವಾಗಿ ನೀಡುವಂತೆ ಸೂಚಿಸಿದೆ.
ಸಂದೀಪ್ ಮಿನಾಚೆ ವಿರುದ್ಧ 18 ವರ್ಷದ ಯುವತಿಯೋರ್ವಳು 2022ರ ಆಗಸ್ಟ್ ನಲ್ಲಿ ಕಠ್ಮುಂಡುವಿನ ಹೋಟೆಲ್ ಒಂದರಲ್ಲಿ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಆರೋಪಗಳ ಹೊರತಾಗಿಯೂ ಜಾಮೀನಿನ ಮೂಲಕ ಜೈಲಿನಿಂದ ಹೊರ ಬಂದಿದ್ದ ಸಂದೀಪ್ ಲಮಿಚಾನೆ ತಮ್ಮ ಕ್ರಿಕೆಟ್ ತಂಡಕ್ಕಾಗಿ ಆಡುವುದನ್ನು ಮುಂದುವರೆಸಿದ್ದರು. ಅವರು 2023ರ ನವೆಂಬರ್ ನಲ್ಲಿ ನಡೆದ ಟಿ20 ಏಷ್ಯಾ ಫೈನಲ್ ನಲ್ಲಿ ಒಮಾನ್ ವಿರುದ್ಧ ನೇಪಾಳ ಪರವಾಗಿ ಕೊನೆಯ ಬಾರಿ ಆಟವಾಡಿದ್ದರು. 2023ರ ಡಿಸೆಂಬರ್ ನಲ್ಲಿ ಪ್ರಕರಣ ಸಾಬೀತಾಗಿದ್ದು, ಇದೀಗ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿದೆ.
ಸಂದೀಪ್ ಲಮಿನಾಚೆ ಅವರು ನೇಪಾಳದಲ್ಲಿ ಕ್ರಿಕೆಟ್ ಅನ್ನು ಪೋಷಿಸಿ ಬೆಳೆಸಿದ್ದು, ಏಕದಿನ ಮತ್ತು ಟಿ20 ಕ್ರಿಕೆಟ್ ನಲ್ಲಿ ನೇಪಾಳದ ಪರ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎಂದು ಹೆಸರುವಾಸಿಯಾಗಿದ್ದರು. ಅಷ್ಟೇ ಅಲ್ಲದೆ ಇವರು ಐಪಿಎಲ್ನಲ್ಲಿ 2018-20ರ ಅವಧಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರವಾಗಿ ಆಟವಾಡಿದ್ದರು.